ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡೂವರೆ ತಿಂಗಳಿನಲ್ಲಿ ಕೋಳಿ ಮೊಟ್ಟೆಯ ಸಗಟು ಧಾರಣೆ ಹೆಚ್ಚಾಗಿದೆ. ಹಾಗಾಗಿ, ಹೊಸ ವರ್ಷಕ್ಕೆ ಚಿಲ್ಲರೆ ಮಾರಾಟ ತುಟ್ಟಿಯಾಗುವ ನಿರೀಕ್ಷೆಯಿದೆ.
ಅಕ್ಟೋಬರ್‌ನಲ್ಲಿ ಸಗಟು ದರ ₹535 (ಪ್ರತಿ 100 ಮೊಟ್ಟೆಗಳಿಗೆ) ಇತ್ತು. ಈ ತಿಂಗಳಿನಲ್ಲಿ ₹625ಕ್ಕೆ ಮುಟ್ಟಿದೆ. ಒಟ್ಟಾರೆ 95 ಪೈಸೆ ಹೆಚ್ಚಳವಾಗಿದೆ.
ಜನರು ಜನವರಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುತ್ತಾರೆ. ಇದರಿಂದ ಕೇಕ್‌ಗಳ ತಯಾರಿಕೆಗೆ ಬೇಡಿಕೆ ಹೆಚ್ಚುತ್ತದೆ. ಅಲ್ಲದೇ, ಚಳಿಗಾಲದಲ್ಲಿ ಮನೆ ಸೇರಿದಂತೆ ಹೋಟೆಲ್‌ಗಳಲ್ಲಿ ಮೊಟ್ಟೆಗಳನ್ನು ಬಳಕೆ ಮಾಡುವುದು ಹೆಚ್ಚು. ಹಾಗಾಗಿ, ಒಂದು ಮೊಟ್ಟೆಗೆ ಸಗಟು ದರ ₹6.50ರಿಂದ ₹6.75 ದಾಟುವ ಸಾಧ್ಯತೆಯಿದೆ. ಹಾಗಾಗಿ, ಚಿಲ್ಲರೆ ಮಾರಾಟ ದರವು ₹7ರಿಂದ ₹7.50ಕ್ಕೆ ಹೆಚ್ಚಳವಾಗಲಿದೆ ಎನ್ನುತ್ತಾರೆ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ (ಎನ್‌ಇಸಿಸಿ) ಪ್ರತಿನಿಧಿಗಳು.
ಪ್ರಸ್ತುತ ರಾಜ್ಯದಲ್ಲಿ ಹೊಸಪೇಟೆ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಮೈಸೂರು, ಕೊಪ್ಪಳ ಜಿಲ್ಲೆ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಮೊಟ್ಟೆ ಕೋಳಿ (ಫಾರಂ ಕೋಳಿ) ಸಾಕಾಣಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಪ್ರತಿನಿತ್ಯ 2 ಕೋಟಿಯಷ್ಟು ಮೊಟ್ಟೆಗಳ ಉತ್ಪಾದನೆಯಾಗುತ್ತದೆ.
‘ಬೆಂಗಳೂರಿನಲ್ಲಿ ಜನರು ಪ್ರತಿದಿನ 90 ಲಕ್ಷ ಮೊಟ್ಟೆಗಳನ್ನು ಬಳಸುತ್ತಾರೆ. ದಾವಣಗೆರೆ, ಹೊಸಪೇಟೆ ಸೇರಿದಂತೆ ರಾಜಧಾನಿ ಸುತ್ತಮುತ್ತಲಿನ ಪ್ರದೇಶದಿಂದ ಇಲ್ಲಿಗೆ ನಿತ್ಯ 40 ಲಕ್ಷ ಮೊಟ್ಟೆಗಳು ಪೂರೈಕೆಯಾಗುತ್ತವೆ. ಉಳಿದಂತೆ ತಮಿಳುನಾಡಿನ ನಾಮಕ್ಕಲ್‌ನಿಂದ 40 ಲಕ್ಷದಿಂದ 50 ಲಕ್ಷ ಮೊಟ್ಟೆಗಳು ಪೂರೈಕೆಯಾಗುತ್ತಿವೆ’ ಎಂದು ವಿವರಿಸುತ್ತಾರೆ ಎನ್‌ಇಸಿಸಿ ಬೆಂಗಳೂರು ವಲಯದ ಪ್ರಭಾರ ಉಸ್ತುವಾರಿಯಾಗಿರುವ ರವೀಂದ್ರ ರೆಡ್ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.