ಬೆಂಗಳೂರು: ಕಳೆದೆರಡು ದಿನಗಳಿಂದ ಮೊಟ್ಟೆ ದರದಲ್ಲಿ ಭಾರಿ ಇಳಿಕೆ ಕಂಡಿದೆ. ಭಾನುವಾರದಿಂದ ಸಗಟು ಮಾರುಕಟ್ಟೆಯಲ್ಲಿ 100ಕ್ಕೆ ₹315 ಇದ್ದ ಮೊಟ್ಟೆ ದರ ಮಂಗಳವಾರ ದಿಢೀರ್ ಕುಸಿತ ಕಂಡಿದ್ದು, ₹290ರಂತೆ ಮಾರಾಟವಾಗುತ್ತಿದೆ.
ಫೆಬ್ರುವರಿಯಲ್ಲಿ ₹480ಕ್ಕೆ ತಲುಪಿದ್ದ ಮೊಟ್ಟೆ ದರ, ಮಾರ್ಚ್ 1ರಿಂದಲೂ ಪ್ರತಿ ಎರಡು ಮೂರು ದಿನಗಳಿಗೊಮ್ಮೆ ದರ ಕುಸಿತ ಕಾಣುತ್ತಲೇ ಇದೆ. ಚಿಲ್ಲರೆ ಮಾರಾಟಗಾರರು ಪ್ರತಿ ಮೊಟ್ಟೆಗೆ ₹3.70ರಂತೆ ಮಾರಾಟ ಮಾಡುತ್ತಿದ್ದು, ಮಂಗಳವಾರದಿಂದ ₹2.90ರಂತೆ ಮಾರಾಟ ಆಗುತ್ತಿದೆ.
‘ಕೊರೊನಾ ಸೋಂಕು ಭೀತಿ ಜನರಲ್ಲಿ ಗಾಢವಾಗಿ ಹರಡಿರುವ ಕಾರಣ ಕೋಳಿ ಮಾಂಸದಂತೆ ಮೊಟ್ಟೆ ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಮೊಟ್ಟೆಯಿಂದ ಕೊರೊನಾ ಸೋಂಕು ಹರಡುತ್ತಿಲ್ಲ ಎಂದು ಜನರಲ್ಲಿ ಜಾಗೃತಿ ಮೂಡುವ ಅಗತ್ಯವಿದೆ’ ಎಂದು ಮೊಟ್ಟೆ ವ್ಯಾಪಾರಿ ದಿವಾಕರ್ ತಿಳಿಸಿದರು.
‘ಬೇಡಿಕೆ–ಪೂರೈಕೆ ಪ್ರಮಾಣದ ಏರಿಳಿತದಿಂದ ಮೊಟ್ಟೆ ದರ ಕಡಿಮೆಯಾಗಿದೆ. ಇದು ಸರ್ವೇ ಸಾಮಾನ್ಯ. ಮುಂದಿನ ದಿನಗಳಲ್ಲಿ ದರ ಏರುವ ನಿರೀಕ್ಷೆ ಇದೆ’ ಎಂದುರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.