ADVERTISEMENT

ಬೆಂಗಳೂರು | ಇಎಲ್‌ಸಿಐಎ ಟೆಕ್‌ ಶೃಂಗಸಭೆ ಜುಲೈ 26ಕ್ಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 14:00 IST
Last Updated 18 ಜುಲೈ 2024, 14:00 IST
ಇಎಲ್‌ಸಿಐಎ ಟೆಕ್‌ ಶೃಂಗಸಭೆ
ಇಎಲ್‌ಸಿಐಎ ಟೆಕ್‌ ಶೃಂಗಸಭೆ   

ಬೆಂಗಳೂರು: ಹೊಸ ತಂತ್ರಜ್ಞಾನ ವಿನಿಮಯ ಹಾಗೂ ಉದ್ಯಮಶೀಲತೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಮೊದಲ ಬಾರಿಗೆ ಎಲೆಕ್ಟ್ರಾನಿಕ್ಸ್‌ ಸಿಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್‌ನಿಂದ (ಇಎಲ್‌ಸಿಐಎ) ಇದೇ 26ರಂದು ‘ಇಎಲ್‌ಸಿಐಎ ಟೆಕ್‌ ಶೃಂಗಸಭೆ’ ಹಮ್ಮಿಕೊಳ್ಳಲಾಗಿದೆ.

‘ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿವೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ಇವೆ. 2 ಲಕ್ಷಕ್ಕೂ ಹೆಚ್ಚು ವೃತ್ತಿಪರರು ವಿವಿಧ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ಅಸೋಸಿಯೇಷನ್‌ ಅಧ್ಯಕ್ಷ ವಿ. ಶ್ರೀರಾಮ್‌ಕುಮಾರ್‌, ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ವಾಣಿಜ್ಯ, ಕೈಗಾರಿಕೆ ಸೇರಿ ವಿವಿಧ ವಲಯದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಕುರಿತು ಉದ್ದಿಮೆದಾರರು ಅನುಭವ ಹಂಚಿಕೊಳ್ಳಲು ಈ ಶೃಂಗಸಭೆಯು ವೇದಿಕೆಯಾಗಲಿದೆ. ವಿವಿಧ ವಲಯದ 250ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ವಿವರಿಸಿದರು.

ADVERTISEMENT

‘ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರು, ಅಂದು ಬೆಳಿಗ್ಗೆ 9.30ಕ್ಕೆ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ  ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫರ್ಮೇಷನ್ ಟೆಕ್ನಾಲಜಿಯ ನಿರ್ದೇಶಕ ದೇಬಬ್ರತಾ ದಾಸ್ ಮುಖ್ಯ ಭಾಷಣ ಮಾಡಲಿದ್ದಾರೆ. ಒಟ್ಟು ನಾಲ್ಕು ಅಧಿವೇಶನಗಳು ನಡೆಯಲಿವೆ ಎಂದು ವಿವರಿಸಿದರು.

ಮೊದಲ ಅಧಿವೇಶನದಲ್ಲಿ ಇನ್ಫೊಸಿಸ್‌ ಉಪಾಧ್ಯಕ್ಷ ಅಶೋಕ್‌ ಪಾಂಡ, ಐಐಎಸ್‌ಸಿ ಪ್ರಾಧ್ಯಾಪಕ ಭಾರದ್ವಾಜ್ ಅಮೃತೂರ್, ಮೈಕ್ರೊ ಟೆಕ್ನಾಲಜಿ ಸೆಂಟರ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಸಂದೀಪ್‌ ಆಲೂರು, ಟೆಕ್ನಿಕಲ್‌ ಸೆಂಟರ್‌ ಇಂಡಿಯಾದ ಮುಖ್ಯಸ್ಥೆ ಲತಾ ಚೆಂಬ್ರಕಲಂ ಅವರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

‘ಇಂಡಸ್ಟ್ರಿ 4.0’ ಅಡಿ ಕೈಗಾರಿಕಾ ಯಾಂತ್ರೀಕರಣ, ಡಿಜಿಟಲೀಕರಣ, ನೆಟ್‌ವರ್ಕಿಂಗ್, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ವಿಲೀನಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ‘ಇಂಟರ್‌ನೆಟ್‌ ಆ‍ಫ್‌ ಥಿಂಗ್ಸ್‌’ ಮತ್ತು ರೊಬೊಟಿಕ್‌ ತಂತ್ರಜ್ಞಾನದ ಬಗ್ಗೆ ಪರಿಣತರು ಮಾಹಿತಿ ಹಂಚಿಕೊಳ್ಳಲಿದ್ದಾರೆ. ತಂತ್ರಜ್ಞಾನದ ಸುಸ್ಥಿರ ಬೆಳವಣಿಗೆ ಬಗ್ಗೆಯೂ ತಜ್ಞರು ವಿವರಣೆ ನೀಡಲಿದ್ದಾರೆ’ ಎಂದು ಹೇಳಿದರು.

ಶೃಂಗಸಭೆಯಲ್ಲಿ ಪಾಲ್ಗೊಳ್ಳುವವರಿಗೆ ತಂತ್ರಜ್ಞಾನದ ಹೊಸ ಅನ್ವೇಷಣೆಗಳ ಬಗ್ಗೆ ತಿಳಿದುಕೊಳ್ಳಲು ಅನುಭವ ವಲಯವನ್ನು (ಎಕ್ಸ್‌ಪೀರಿಯನ್ಸ್‌ ಜೋನ್) ತೆರೆಯಲಾಗುತ್ತದೆ. ನವೋದ್ಯಮಗಳಿಗೂ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ ಸದಸ್ಯರಾದ ಎ. ವೈದ್ಯನಾಥನ್‌, ಎ. ವಿನಯ್‌ಕುಮಾರ್‌, ಸಲಹೆಗಾರರಾದ ಎನ್‌.ಎಸ್. ರಮಾ, ಪ್ರಧಾನ ವ್ಯವಸ್ಥಾಪಕ ಶಿವಯೋಗಿ ವಿ. ಬಳ್ಳೊಳ್ಳಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.