ADVERTISEMENT

ಇಪಿಎಫ್‌ ಖಾತೆದಾರರಿಗೆ ಠೇವಣಿ ಆಧಾರಿತ ವಿಮೆ ವಿಸ್ತರಣೆ

ಪಿಟಿಐ
Published 17 ಅಕ್ಟೋಬರ್ 2024, 15:48 IST
Last Updated 17 ಅಕ್ಟೋಬರ್ 2024, 15:48 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಯಿಂದ (ಇಪಿಎಫ್‌ಒ) ಇಪಿಎಫ್ ಖಾತೆದಾರರಿಗೆ ನೀಡುವ ಉದ್ಯೋಗಿಯ ಠೇವಣಿ ಆಧಾರಿತ ವಿಮಾ (ಇಡಿಎಲ್‌ಐ) ಸೌಲಭ್ಯವನ್ನು ಪ್ರಸಕ್ತ ವರ್ಷದ ಏಪ್ರಿಲ್‌ 28ರಿಂದ ಅನ್ವಯವಾಗುವಂತೆ ಮುಂದಿನ ಮೂರು ವರ್ಷದವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್‌ ಮಾಂಡವೀಯ ತಿಳಿಸಿದ್ದಾರೆ.

ಈ ವಿಮಾ ಯೋಜನೆಯಡಿ ಖಾತೆದಾರರಿಗೆ ಗರಿಷ್ಠ ₹7 ಲಕ್ಷದವರೆಗೆ ಕವರೇಜ್ ಸಿಗುತ್ತದೆ. ಸರ್ಕಾರದ ಈ ಕ್ರಮದಿಂದ 6 ಕೋಟಿ ಇಪಿಎಫ್‌ಒ ಸದಸ್ಯರಿಗೆ ಅನುಕೂಲವಾಗಲಿದೆ.

1976ರಲ್ಲಿ ಇಡಿಎಲ್‌ಐ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಉದ್ಯೋಗಿಯು ಮರಣ ಹೊಂದಿದರೆ ಆತನ ಕುಟುಂಬಕ್ಕೆ ಆರ್ಥಿಕ ನೆರವು ಕಲ್ಪಿಸುವುದು ಇದರ ಗುರಿಯಾಗಿದೆ.

ADVERTISEMENT

2018ರಲ್ಲಿ ಇದರಡಿ ಕನಿಷ್ಠ ₹1.5 ಲಕ್ಷ ವಿಮಾ ಸೌಲಭ್ಯ ಕಲ್ಪಿಸಲಾಗಿತ್ತು. 2021ರ ಏಪ್ರಿಲ್‌ವರೆಗೆ ಗರಿಷ್ಠ ಸೌಲಭ್ಯವನ್ನು ₹6 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು.

ಆ ನಂತರ ಕೇಂದ್ರ ಸರ್ಕಾರವು 2021ರ ಏಪ್ರಿಲ್‌ 28ರಂದು ಕನಿಷ್ಠ ₹2.5 ಲಕ್ಷ ಹಾಗೂ ಗರಿಷ್ಠ ₹7 ಲಕ್ಷ ವಿಮಾ ಸೌಲಭ್ಯವನ್ನು ನಿಗದಿಪಡಿಸಿ ಮೂರು ವರ್ಷದವರೆಗೆ ವಿಸ್ತರಿಸಿತ್ತು.

ಅಲ್ಲದೆ, ವಿಮಾ ಸೌಲಭ್ಯ ಪಡೆಯಲು ಯಾವುದೇ ಒಂದು ಸಂಸ್ಥೆಯಲ್ಲಿ ಉದ್ಯೋಗಿಯು 12 ತಿಂಗಳು ನಿರಂತರವಾಗಿ ಸೇವೆ ಸಲ್ಲಿಸಬೇಕು ಎಂಬ ಷರತ್ತನ್ನು ಸಡಿಲಗೊಳಿಸಿತು. ಈ ಅವಧಿಯಲ್ಲಿ ಕೆಲಸ ಬದಲಾಯಿಸಿದ ಉದ್ಯೋಗಿಗಳಿಗೂ ಇದರಡಿ ರಕ್ಷಣೆ ಕಲ್ಪಿಸಿತು.

ಉದ್ಯೋಗಿಯು ಕಾರ್ಮಿಕರ ಭವಿಷ್ಯ ನಿಧಿಗೆ (ಇಪಿಎಫ್) ಸೇರ್ಪಡೆಗೊಂಡಾಗ ಉದ್ಯೋಗದಾತ ಸಂಸ್ಥೆಯು ನೀಡುವ ಇಪಿಎಫ್ ಪಾಲಿನಲ್ಲಿ ಒಂದಿಷ್ಟು ಮೊತ್ತವು ಉದ್ಯೋಗಿಯ ಠೇವಣಿ ಆಧಾರಿತ ವಿಮೆಗೆ ಜಮೆಯಾಗುತ್ತದೆ. ಈ ವಿಮಾ ಮೊತ್ತವು ಸಿಗಬೇಕು ಅಂದರೆ ಮೃತಪಡುವ ಸಂದರ್ಭದಲ್ಲಿ ಉದ್ಯೋಗಿಯು ಕೆಲಸದಲ್ಲಿರಬೇಕು. ಸಕಾಲಕ್ಕೆ ಇಪಿಎಫ್‌ಗೆ ತನ್ನ ಪಾಲಿನ ಕೊಡುಗೆ ಪಾವತಿಸಿರಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.