ADVERTISEMENT

ಹಿಂಬಾಗಿಲಿನಿಂದ ವರ್ತಕರ ಪ್ರವೇಶ: ಕೊಬ್ಬರಿ ದಾಸ್ತಾನಿಲ್ಲದ ರೈತರಿಂದ ನೋಂದಣಿ- ಆರೋಪ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 21:47 IST
Last Updated 6 ಮಾರ್ಚ್ 2024, 21:47 IST
ಮಂಜಣ್ಣ
ಮಂಜಣ್ಣ   

ಹಾಸನ: ‘ಕೊಬ್ಬರಿ ಖರೀದಿ ನೋಂದಣಿ ಪ್ರಕ್ರಿಯೆಯಲ್ಲಿ ಕಳೆದ ಬಾರಿ ನೇರವಾಗಿಯೇ ಭಾಗವಹಿಸಿದ್ದ ವರ್ತಕರು ಈ ಬಾರಿ ಹಿಂಬಾಗಿಲಿನಿಂದ ನೋಂದಣಿ ಮಾಡಿಸಿದ್ದಾರೆ’

–ಹೀಗೆಂದು ಆರೋಪಿಸಿದ್ದು, ಹಿರೀಸಾವೆ ಖರೀದಿ ಕೇಂದ್ರಕ್ಕೆ ಹೆಸರು ನೋಂದಾಯಿಸಲು ಬಂದಿದ್ದ ದಿಡಗ ತುಮಕೂರು ಗ್ರಾಮದ ರೈತ ಮಂಜಣ್ಣ.

‘ಕೊಬ್ಬರಿ ದಾಸ್ತಾನು ಇರುವವರು ಮಾತ್ರ ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ನಿಜವಾದ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ರೈತರೇ ಯೋಚಿಸಬೇಕು’ ಎಂದರು.

ADVERTISEMENT

‘ಕಮಿಷನ್‌ ಆಸೆಗಾಗಿ ಶೇ 40ರಷ್ಟು ರೈತರು ತಮ್ಮ ಬಳಿ ಕೊಬ್ಬರಿ ದಾಸ್ತಾನು ಇಲ್ಲದಿದ್ದರೂ ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ದೂರಿದರು. ಆದರೆ, ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಫೆಬ್ರುವರಿಯಲ್ಲಿ ನಡೆದಿದ್ದ ನೋಂದಣಿ ಪ್ರಕ್ರಿಯೆಯಲ್ಲಿ ರೈತರ ಹೆಸರಿನಲ್ಲಿ ವರ್ತಕರು ಹೆಸರು ನೋಂದಾಯಿಸಿದ್ದರಿಂದ ರಾಜ್ಯ ಸರ್ಕಾರವು, ನೋಂದಣಿಯನ್ನು ರದ್ದುಪಡಿಸಿತ್ತು. 

ರೈತರ ಪಹಣಿ, ಫ್ರೂಟ್ಸ್‌ ಐಡಿ, ಆಧಾರ್‌, ಆಧಾರ್ ಜೋಡಣೆಯಾದ ಬ್ಯಾಂಕ್‌ ಖಾತೆಯ ಪಾಸ್‌ಬುಕ್‌ ಇದ್ದರಷ್ಟೇ ನೋಂದಣಿ ಸಾಧ್ಯ.

ಈ ಕುರಿತು ಕೊಬ್ಬರಿ ದಾಸ್ತಾನು ಇಲ್ಲದ ರೈತರೊಂದಿಗೆ ಮಾತುಕತೆ ನಡೆಸಿರುವ ವರ್ತಕರು, ‘ನಿಮ್ಮ ದಾಖಲೆಗಳನ್ನು ನೀಡಿ ಹೆಸರು ನೋಂದಾಯಿಸಿ. ಕೊಬ್ಬರಿ ಖರೀದಿ ಶುರುವಾದ ಸಂದರ್ಭದಲ್ಲಿ ನಮ್ಮ ಬಳಿ ದಾಸ್ತಾನು ಇರುವ ಕೊಬ್ಬರಿಯನ್ನು ನಿಮಗೆ ನೀಡುತ್ತೇವೆ. ಖಾತೆಗೆ ಬರುವ ಹಣದಲ್ಲಿ ನಿಮಗೆ ಕಮಿಷನ್‌ ಕೊಡುತ್ತೇವೆಂದು ಹೇಳಿದ್ದಾರೆ’ ಎಂದು ಹೇಳಲಾಗಿದೆ. 

ಹೊಸದುರ್ಗದ ಕೊಬ್ಬರಿ ಖರೀದಿ ಕೇಂದ್ರದ ಬಳಿ ಸರದಿಯಲ್ಲಿ ನಿಂತಿದ್ದ ರೈತರು

ಸಾಲಿನಲ್ಲಿ ನಿಲ್ಲಲು ಕೂಲಿ ನೀಡಿದ ದಲ್ಲಾಳಿಗಳು

ಚಿತ್ರದುರ್ಗ: ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ಕೂಲಿ ಆಧಾರದಲ್ಲಿ ಜನರನ್ನು ಸರದಿ ಸಾಲಿನಲ್ಲಿ ನಿಲ್ಲಿಸುವ ವರ್ತಕರು ನೋಂದಣಿ ಸಮಯಕ್ಕೆ ಅರ್ಹ ರೈತರನ್ನು ಸ್ಥಳಕ್ಕೆ ಕರೆಯಿಸಿ ಹೆಸರು ನೋಂದಾಯಿಸಿರುವುದು ಬೆಳಕಿಗೆ ಬಂದಿದೆ.  ‘ಒಬ್ಬ ವ್ಯಕ್ತಿ ಮೂರು ದಿನಗಳಿಂದಲೂ ನೋಂದಣಿಗೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇದರಿಂದ ಅರ್ಹ ರೈತರಿಗೆ ತೊಂದರೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಗ್ರಾಮವೊಂದರ ಮೂರು ಮನೆಗಳಲ್ಲಿ ಮಾತ್ರ ಕೊಬ್ಬರಿ ದಾಸ್ತಾನಿದೆ. ಆದರೆ ಆ ಊರಿನ 100 ಜನರು ನೋಂದಣಿ ಮಾಡಿಸಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ದೂರಿದರು. ಹಿರಿಯೂರು ಚಿತ್ರದುರ್ಗ ಹೊಳಲ್ಕೆರೆ ತಾಲ್ಲೂಕಿನ ಕೇಂದ್ರಗಳಲ್ಲೂ ಹೊಸದುರ್ಗದ ವರ್ತಕರು ಬೀಡುಬಿಟ್ಟಿದ್ದರು. ಜಿಲ್ಲೆಯ ಆರು ಖರೀದಿ ಕೇಂದ್ರಗಳಲ್ಲಿ ಮೂರು ದಿನಗಳಲ್ಲಿ ಒಟ್ಟು 3358 ರೈತರು 42112 ಕ್ವಿಂಟಲ್‌ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ. ‘ಚಿತ್ರದುರ್ಗ ಜಿಲ್ಲೆಗೆ 40000 ಕ್ವಿಂಟಲ್‌ ಖರೀದಿ ಮಿತಿ ನಿಗದಿಪಡಿಸಲಾಗಿದೆ. ಹಾಗಾಗಿ ಬುಧವಾರ ಸಂಜೆ ವೇಳೆಗೆ ನೋಂದಣಿ ಪ್ರಕ್ರಿಯೆ ಸ್ಥಗಿತವಾಗಿದೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಜಿಲ್ಲಾ ಶಾಖಾ ವ್ಯವಸ್ಥಾಪಕ ಬಸವೇಶ ಎಸ್. ನಾಡಿಗರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ನೋಂದಣಿ ಸ್ಥಗಿತ: ರೈತರ ಪರದಾಟ

ಚಿಕ್ಕಮಗಳೂರು: ಕೊಬ್ಬರಿ ಮಾರಾಟಕ್ಕೆ ರೈತರ ನೋಂದಣಿ ಪ್ರಕ್ರಿಯೆ ಮೂರೇ ದಿನಗಳಲ್ಲಿ ಅಂತ್ಯಗೊಂಡಿದ್ದು ನೋಂದಣಿಗೆ ಅವಕಾಶ ಸಿಗದೆ ಸಾವಿರಾರು ರೈತರು ಪರದಾಡಿದರು. ಜಿಲ್ಲೆಯಲ್ಲಿ ಏಳು ನೋಂದಣಿ ಕೇಂದ್ರಗಳನ್ನು ತೆರೆಯಲಾಗಿತ್ತು. ಒಟ್ಟು 55 ಸಾವಿರ ಕ್ವಿಂಟರ್ ಖರೀದಿಗೆ ಸರ್ಕಾರ ಅವಕಾಶ ನೀಡಿತ್ತು. ಬುಧವಾರ ಸಂಜೆ 5ಗಂಟೆ ವೇಳೆಗೆ ನಿಗದಿಪಡಿಸಿರುವ ಮಿತಿ ಮುಟ್ಟಿದ್ದರಿಂದ ನೋಂದಣಿ ಸ್ಥಗಿತವಾಯಿತು. ಇದರಿಂದ ಕೇಂದ್ರದ ಮುಂದೆ ಸಾಲಿನಲ್ಲಿ ನಿಂತಿದ್ದ ನೂರಾರು ರೈತರು ವಾಪಸ್ ಮನೆಗೆ ಹೋಗಬೇಕಾಯಿತು. ನೋಂದಣಿಗೆ ಅವಕಾಶ ಸಿಗದ ರೈತರು ಅಸಮಾಧಾನ ವ್ಯಕ್ತಪಡಿಸಿದರು. ‘ವರ್ತಕರೇ ಊರೂರು ಸುತ್ತಿ ರೈತರನ್ನು ಕರೆತಂದು ಸಾಲಿನಲ್ಲಿ ನಿಲ್ಲಿಸಿದ್ದಾರೆ. ತೋಟದಲ್ಲಿ ತೆಂಗಿನ ಫಸಲು ಇರಲಿ ಇಲ್ಲದಿರಲಿ ಪಹಣಿಯಲ್ಲಿ ತೆಂಗು ಎಂದು ನಮೂದಾಗಿದ್ದರೆ ಅಂತಹ ರೈತರನ್ನು ಹುಡುಕಿ ತಂದಿದ್ದಾರೆ. ಅವರಿಗೆ ಆಯಾ ದಿನಗಳಂದು ಖರ್ಚಿಗೆ ಹಣ ನೀಡಿರುವ ವರ್ತಕರು ಅದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಮೂರೇ ದಿನದಲ್ಲಿ ಇಷ್ಟು ಪ್ರಮಾಣದ ನೋಂದಣಿಯಾಗಿದೆ’ ಎಂದು ತೆಂಗಿನ ನಾರಿನ ಮಹಾಮಂಡಳದ ನಿರ್ದೇಶಕ ಕುಮಾರಸ್ವಾಮಿ ಆರೋಪಿಸಿದರು.

ರೈತರ ಹೆಸರಿನಲ್ಲಿ ಟೋಕನ್‌ಗೆ ಯತ್ನ

ತುಮಕೂರು: ಕೊಬ್ಬರಿ ನೋಂದಣಿ ಕೇಂದ್ರದ ಬಳಿ ಬೇರೊಬ್ಬರ ಹೆಸರಿನಲ್ಲಿ ಟೋಕನ್ ಪಡೆಯಲು ಬುಧವಾರ ಸರದಿಯಲ್ಲಿ ನಿಂತಿದ್ದ ವರನ್ನು ಎಪಿಎಂಸಿ ಅಧಿಕಾರಿಗಳು ಹೊರಗೆ ಕಳುಹಿಸಿದ್ದಾರೆ.

ತುರುವೇಕೆರೆ ತಾಲ್ಲೂಕು ಮಾಯಸಂದ್ರ ನೋಂದಣಿ ಕೇಂದ್ರದಲ್ಲಿ ಟೋಕನ್ ಪಡೆಯಲು ನಿಂತಿದ್ದ 20ಕ್ಕೂ ಹೆಚ್ಚು ಮಹಿಳೆಯರನ್ನು ಹೊರಗೆ ಕಳುಹಿಸಲಾಗಿದೆ. ದೂರು ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದ ಎಪಿಎಂಸಿ ಉಪ ನಿರ್ದೇಶಕ ರಾಜಣ್ಣ ಅವರು, ಎಚ್ಚರಿಕೆ ನೀಡಿದ ನಂತರ ಮಹಿಳೆಯರು ಸ್ಥಳದಿಂದ ತೆರಳಿದ್ದಾರೆ.

‘ವರ್ತಕರು, ರವಾನೆದಾರರ ಪರವಾಗಿ ಬಂದು ಟೋಕನ್ ಪಡೆಯುವುದು, ನೋಂದಣಿ ಮಾಡಿಸುವುದು ಗೊತ್ತಾದರೆ ವರ್ತಕರ ಪರವಾನಗಿ ರದ್ದು‍ಪಡಿಸಲಾಗುವುದು. ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.