ನಿಸರ್ಗ ಮತ್ತು ಮಾನವ ನಿರ್ಮಿತ ವಿಪತ್ತುಗಳು ಜಾಗತಿಕವಾಗಿ ಪದೇ ಪದೇ ಸಂಭವಿಸುತ್ತಿವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಭೂಕಂಪ, ಪ್ರವಾಹ, ಸುನಾಮಿ ಮತ್ತು ಚಂಡಮಾರುತದಿಂದ ಅಪಾರ ಆಸ್ತಿಪಾಸ್ತಿ ಮತ್ತು ಜೀವ ಹಾನಿ ಮತ್ತು ಹಾನಿ ಸಂಭವಿಸುತ್ತಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರ(ಎನ್‌ಡಿಎಂಎ) ನೀಡಿರುವ ಮಾಹಿತಿ ಪ್ರಕಾರ, ದೇಶದ 4 ಕೋಟಿ ಹೆಕ್ಟೇರ್ ಪ್ರದೇಶ ಅಥವಾ ಶೇಕಡ 12ರಷ್ಟು ಭೂ ಪ್ರದೇಶ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ವಿಪತ್ತುಗಳು ದೇಶದ ಆರ್ಥಿಕತೆ ಮೇಲೆಯೂ ಪರಿಣಾಮ ಬೀರುತ್ತಿದ್ದು, ಜನಸಂಖ್ಯೆ ಮತ್ತು ಸುಸ್ಥಿರ ಅಭಿವೃದ್ಧಿಗೂ ತೊಡಕಾಗುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ, ಆರ್ಥಿಕ–ಸಾಮಾಜಿಕ ಪರಿಸ್ಥಿತಿ, ಯೋಜನಾ ರಹಿತ ನಗರೀಕರಣ ಮತ್ತು ಜಾಗತಿಕ ತಾಪಮಾನದಿಂದ ನೈಸರ್ಗಿಕ ವಿಪತ್ತುಗಳು ಸಂಭವಿಸುತ್ತಿವೆ.
ನೈಸರ್ಗಿಕ ವಿಪತ್ತುಗಳು ಹಲವು ಬಾರಿ ಅಪಾರ ಹಾನಿ ಮಾಡುತ್ತವೆ. ಅವುಗಳನ್ನು ತಡೆಯುವುದು ಮತ್ತು ನಿಯಂತ್ರಿಸುವುದು ಅಸಾಧ್ಯವಾಗುತ್ತದೆ. ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿದ ಪ್ರವಾಹದಿಂದ ಅಪಾರ ಹಾನಿ ಸಂಭವಿಸಿತು. ಪ್ರವಾಹದಲ್ಲಿ ಹಲವು ಮನೆಗಳು ಮತ್ತು ವಾಹನಗಳು ಕೊಚ್ಚಿ ಹೋದವು. ಇಂತಹ ಸಂಕಷ್ಟದ ಸಂದರ್ಭದಲ್ಲಿ ‘ವಿಮೆ’ ಪರಿಹಾರ ನೆರವಿಗೆ ಧಾವಿಸುತ್ತದೆ. ಇದರಿಂದ ವೈಯಕ್ತಿಕವಾಗಿ ಉಂಟಾದ ನಷ್ಟ ಮತ್ತು ಆಸ್ತಿಗೆ ಹಾನಿಯಾಗಿರುವುದನ್ನು ಭರ್ತಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
ಭಾರತದಲ್ಲಿ ಯಾವುದಾದರೂ ದೊಡ್ಡ ವಿಪತ್ತು ಸಂಭವಿಸಿದಾಗ ಆರ್ಥಿಕ ನಷ್ಟ ಮತ್ತು ವಿಮೆ ಮಾಡಿದ ಮೊತ್ತದ ನಡುವೆ ಅಪಾರ ವ್ಯತ್ಯಾಸವಿರುತ್ತದೆ. ಜಾಗೃತಿಯ ಕೊರತೆ ಮತ್ತು ಹಣಕಾಸು ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಇದಕ್ಕೆ ಕಾರಣ. ವಿಮೆಯಿಂದ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಇಂತಹ ಯೋಜನೆಗಳು ಪೂರಕವಾಗುತ್ತವೆ. ಇಲ್ಲಿ ಕೆಲವು ವಿಮೆ ಯೋಜನೆಗಳ ಬಗ್ಗೆ ಸಲಹೆ ನೀಡಲಾಗಿದೆ. ಇವುಗಳಿಂದ ಕುಟುಂಬ ಮತ್ತು ಆಸ್ತಿಯನ್ನು ರಕ್ಷಣೆಗೆ ನೆರವಾಗುತ್ತದೆ.
ಗೃಹ ವಿಮೆ
ಯಾವುದೇ ರೀತಿಯ ನೈಸರ್ಗಿಕ ವಿಪತ್ತು ಸಂಭವಿಸಿದಾಗ ಮನೆಗಳೇ ಹೆಚ್ಚು ಹಾನಿಗೊಳ್ಳುವುದು ಸಹಜ. ಹಲವು ಮಂದಿ ಸುಲಭ ತಿಂಗಳ ಕಂತು (ಇಎಂಐ) ಪಾವತಿಸಿ ಸಾಕಷ್ಟು ಶ್ರಮಪಟ್ಟ ಮನೆ ನಿರ್ಮಿಸಿಕೊಂಡಿದ್ದರೂ ರಕ್ಷಣೆಯ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಮನೆಗಳನ್ನು ವಿಮಾ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಆಸಕ್ತಿ ವಹಿಸುವುದಿಲ್ಲ. ಗೃಹ ವಿಮೆ ಯೋಜನೆಯಿಂದ ನೈಸರ್ಗಿಕ ದುರಂತಗಳಿಂದ ಎದುರಾಗಬಹುದಾದ ಸಂಕಷ್ಟಗಳನ್ನು ನಿವಾರಿಸಲು ಅನುಕೂಲವಾಗಲಿದೆ. ಇದು ಕೇವಲ ಮನೆಯ ಗೋಡೆಗಳ ರಕ್ಷಣೆ ಮಾತ್ರವಲ್ಲದೇ ಒಳಗೂ ಭದ್ರತೆ ಒದಗಿಸುತ್ತದೆ. ಕಠಿಣ ಪರಿಸ್ಥಿತಿಯಲ್ಲೂ ನೆಮ್ಮದಿಯಿಂದ ಇರಲು ಅನುಕೂಲ ಕಲ್ಪಿಸುತ್ತದೆ. ಇತರ ಆಸ್ತಿಗಳ ರಕ್ಷಣೆಗೆ ವೆಚ್ಚ ಮಾಡುವುದನ್ನು ಹೋಲಿಸಿದರೆ ಗೃಹ ವಿಮೆ ದುಬಾರಿ ಅಲ್ಲ. ಪ್ರತಿ ದಿನಕ್ಕೆ ಕೇವಲ ₹5 ಪಾವತಿಸುವ ಯೋಜನೆಗಳಿವೆ. ಈ ವಿಮೆ ಯೋಜನೆಗಳನ್ನು ಒಂದು ವರ್ಷಕ್ಕೆ ಅಥವಾ ಸುದೀರ್ಘ ಅವಧಿಗೂ ಖರೀದಿಸಬಹುದಾಗಿದೆ.
ಆರೋಗ್ಯ ವಿಮೆ
ಪ್ರವಾಹ ಸಂಭವಿಸಿದಾಗ ಪ್ರಮುಖವಾಗಿ ಸೋಂಕು ರೋಗಗಳು ಕಾಣಿಸಿಕೊಳ್ಳುತ್ತವೆ. ಜತೆಗೆ ಅಲ್ಲಲ್ಲಿ ಸಂಗ್ರಹವಾಗುವ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿ ಜ್ವರ, ಕಾಲರಾ, ಮಲೇರಿಯಾ, ಡೆಂಗಿ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ತುರ್ತು ವೈದ್ಯಕೀಯ ವೆಚ್ಚ ನಿಭಾಯಿಸಲು ಆರೋಗ್ಯ ವಿಮೆ ನೆರವಾಗುತ್ತದೆ. ನಿಮ್ಮ ಮತ್ತು ಕುಟುಂಬದ ನೆರವಿಗೆ ಆರೋಗ್ಯ ವಿಮೆ ಬಹಳ ಉಪಯೋಗಕಾರಿಯಾಗುತ್ತದೆ. ಜತೆಗೆ, ಗುಣಮಟ್ಟದ ಸೇವೆ ಪಡೆಯಲು ಸಾಧ್ಯವಾಗುತ್ತದೆ.
ವಾಹನ ವಿಮೆ
ಪ್ರವಾಹ, ಭೂಕಂಪಗಳು ಸಂಭವಿಸಿದಾಗ ವಾಹನಗಳಿಗೂ ಹಾನಿಯಾಗುತ್ತದೆ. ಕಾರುಗಳ ವಿಮೆ ಪಾಲಿಸಿಗಳ ಬಗ್ಗೆ ಎಚ್ಚರವಹಿಸುವುದು ಸೂಕ್ತ. ಎಂಜಿನ್ ರಕ್ಷಣೆ, ಕಾರಿನ ಮೌಲ್ಯದ ಇಳಿಕೆ ಮುಂತಾದ ವಿಷಯಗಳ ಬಗ್ಗೆ ನಿಗಾವಹಿಸಬೇಕು. ಸಮಗ್ರವಾದ ಮೋಟರ್ ವಿಮೆ ಪಾಲಿಸಿಯಿಂದ ವಾಹನವನ್ನು ಎಲ್ಲ ರೀತಿಯಿಂದಲೂ ರಕ್ಷಿಸಬಹುದು.
ನೈಸರ್ಗಿಕ ವಿಪತ್ತುಗಳು ಹೆಚ್ಚುತ್ತಿದ್ದರೂ ಜನರು ತಮ್ಮ ಜೀವ ಮತ್ತು ಆಸ್ತಿ ರಕ್ಷಿಸಲು ವಿಮೆ ಪಾಲಿಸಿ ಖರೀದಿಸುವುದನ್ನು ನಿರ್ಲಕ್ಷ್ಯ ವಹಿಸುತ್ತಾರೆ. ನೈಸರ್ಗಿಕ ವಿಪತ್ತುಗಳು ಯಾವುದೇ ರೀತಿಯ ಎಚ್ಚರಿಕೆ ನೀಡದೆ ಸಂಭವಿಸುತ್ತವೆ. ಹೀಗಾಗಿ, ವಿಮೆ ಪಾಲಿಸಿಗಳನ್ನು ಖರೀದಿಸುವುದು ಸೂಕ್ತ. ಈ ಮೂಲಕ ಶ್ರಮವಹಿಸಿ ದುಡಿದ ಹಣದಿಂದ ಹೂಡಿಕೆ ಮಾಡಿದ ಆಸ್ತಿಯನ್ನು ಮತ್ತು ನಿಮ್ಮ ಅತ್ಯಮೂಲ್ಯದ ಜೀವದ ರಕ್ಷಣೆಯ ಬಗ್ಗೆ ಕಾಳಜಿವಹಿಸಿದಂತಾಗುತ್ತದೆ.
(ಲೇಖಕ: ಬಜಾಜ್ ಅಲೈಯನ್ಸ್ ಜನರಲ್ ಇನ್ಶುರನ್ಸ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ)
ಕಾಫಿ ಬೆಳೆಗಾರರಿಗೆ ಹೊಸ ಆ್ಯಪ್
ದೇಶದಲ್ಲಿನ ಕಾಫಿ ಬೆಳೆಗಾರರಿಗೆ ತಾಂತ್ರಿಕ ಮಾಹಿತಿಗಾಗಿ ಕೇಂದ್ರ ಸರ್ಕಾರ ಎರಡು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ. ಇತ್ತೀಚಿಗೆ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಸುರೇಶ್ ಪ್ರಭು ಅವರು ಕೃಷಿ ತರಂಗ ಮತ್ತು ಕಾಫಿ ಫೀಲ್ಡ್ ಫೋರ್ಸ್ ಆ್ಯಪ್‌ಗಳಿಗೆ ಚಾಲನೆ ನೀಡಿದ್ದಾರೆ. ಕಾಫಿ ಬೆಳೆಯುವ ರೈತರು ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಕೃಷಿ ತರಂಗ ಆ್ಯಪ್ ಮೂಲಕ ಕಾಫಿ ಬೆಳೆಗಾರರು ಪರಿಸರ ಸುಸ್ಥಿರತೆ, ಉತ್ಪಾದನೆ ಹೆಚ್ಚಳ, ಹೊಸ ತಳಿಗಳ ಮಾಹಿತಿ, ಬೆಲೆ, ರಸಗೊಬ್ಬರ ಮತ್ತು ರಾಸಾಯನಿಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಕಾಫಿ ಫೀಲ್ಡ್ ಫೋರ್ಸ್ ಆ್ಯಪ್ ಮೂಲಕ ಮಣ್ಣಿನ ಫಲವತ್ತತೆ, ಹವಾಮಾನ, ದೇಶದಲ್ಲಿನ ಕಾಫಿ ವಹಿವಾಟಿನ ಮಾಹಿತಿಯನ್ನು ತಿಳಿಯಬಹುದು.ಗೂಗಲ್ ಪ್ಲೆಸ್ಟೋರ್: Krishi Tharang app
ಮೈಸೂರಿಗೂ ಬಂತು ನೇಬರ್ಲಿ ಆ್ಯಪ್
ಮಾಹಿತಿ ಶೋಧದ ಜಗತ್ತಿನ ದೈತ್ಯ ತಾಣ ಗೂಗಲ್, ಭಾರತದ 5 ನಗರಗಳಲ್ಲಿ ನೇಬರ್ಲಿ ಆ್ಯಪ್ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ. ಈ ಐದು ನಗರಗಳಲ್ಲಿ ರಾಜ್ಯದ ಮೈಸೂರು ಸೇರಿದೆ. ಗೂಗಲ್ ಕಳೆದ ಮೇ ತಿಂಗಳಲ್ಲಿ ನೈಬರ್ಲಿ ಆ್ಯಪ್ ಬೇಟಾ ಸೇವೆಯನ್ನು ಮುಂಬೈನಲ್ಲಿ ಪರಿಚಯಿಸಿತ್ತು. ನಂತರ ಅದನ್ನು ಜೈಪುರಕ್ಕೂ ವಿಸ್ತರಣೆ ಮಾಡಿತ್ತು. ಇನ್ನು ನೈಬರ್ಲಿ ಆ್ಯಪ್ ಸೇವೆಯನ್ನು ಮೈಸೂರು ಸೇರಿದಂತೆ ಅಹಮದಾಬಾದ್, ಕೊಯಮತ್ತೂರು, ವಿಶಾಖಪಟ್ಟಣ ಮತ್ತು ಕೋಟಾ ನಗರಗಳ ನಾಗರಿಕರು ಬಳಕೆ ಮಾಡಬಹುದು ಎಂದು ಗೂಗಲ್ ಪ್ರಾಡಕ್ಟ್ ಮ್ಯಾನೇಜರ್ ಜೋಶ್ ವುಡ್‌ವಾರ್ಡ್ ತಿಳಿಸಿದ್ದಾರೆ.
ನೇಬರ್ಲಿ ಆ್ಯಪ್‌ನಲ್ಲಿ ಬಳಕೆದಾರರು ಸ್ಥಳೀಯ ಭಾಷೆಯ ಧ್ವನಿಯ ಮೂಲಕ ಮಾಹಿತಿ ಪಡೆಯುವ ಅವಕಾಶ ಕಲ್ಪಿಸಿರುವುದು ವಿಶೇಷವಾಗಿದೆ. ತಮಗೆ ಬೇಕಿರುವ ವಿಳಾಸಗಳು, ಸಿನಿಮಾ ಮಂದಿರಗಳು, ಶಾಪಿಂಗ್ ಮಾಲ್‌ಗಳು, ಆಸ್ಪತ್ರೆಗಳು, ಹೋಟೆಲ್‌ಗಳು, ಟ್ಯೂಷನ್ ಕೇಂದ್ರಗಳ ಬಗ್ಗೆ ಸುಲಭವಾಗಿ ದೊರೆಯಲಿದೆ. ಸ್ಥಳೀಯ ಮಟ್ಟದ ವಿಳಾಸಗಳು ಹಾಗೂ ಸ್ಥಳೀಯ ಮಾಹಿತಿಯನ್ನು ಅಲ್ಲಿನ ಪ್ರಾದೇಶಿಕ ಭಾಷೆಗಳಲ್ಲಿ ಪಡೆಯುವುದಕ್ಕಾಗಿಯೇ ನೇಬರ್ಲಿ ಆ್ಯಪ್ ಅನ್ನು ವಿನ್ಯಾಸ ಮಾಡಲಾಗಿದೆ. ಇದನ್ನು ವಿವಿಧ ನಗರಗಳಲ್ಲಿ ಹಲವು ತಿಂಗಳ ಕಾಲ ಪರೀಕ್ಷೆ ನಡೆಸಲಾಗಿತ್ತು ಎಂದು ಗೂಗಲ್ ಸಂಸ್ಥೆ ತಿಳಿಸಿದೆ.
ಗೂಗಲ್ ಪ್ಲೆಸ್ಟೋರ್: Neighbourly app
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.