ADVERTISEMENT

ಹೆಚ್ಚಿನ ಸಂಬಳದವರಿಗೆ ಹೊಸ ಪಿಂಚಣಿ ಯೋಜನೆ?

ಪಿಟಿಐ
Published 20 ಫೆಬ್ರುವರಿ 2022, 19:31 IST
Last Updated 20 ಫೆಬ್ರುವರಿ 2022, 19:31 IST
ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ)
ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ)    

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಸಂಘಟಿತ ವಲಯದ, ತಿಂಗಳಿಗೆ ₹ 15 ಸಾವಿರಕ್ಕಿಂತ ಹೆಚ್ಚಿನ ಮೂಲವೇತನ ಪಡೆಯುತ್ತಿರುವ, ನೌಕರರ ಪಿಂಚಣಿ ಯೋಜನೆ –1995ರ (ಇಪಿಎಸ್‌–95) ವ್ಯಾಪ್ತಿಗೆ ಬಾರದವರಿಗಾಗಿ ಹೊಸ ಪಿಂಚಣಿ ಯೋಜನೆಯೊಂದನ್ನು ರೂಪಿಸುವ ಚಿಂತನೆ ನಡೆಸಿದೆ.

ಈಗಿರುವ ನಿಯಮಗಳ ಪ್ರಕಾರ, ಕೆಲಸಕ್ಕೆ ಸೇರುವ ಸಂದರ್ಭದಲ್ಲಿ ಮೂಲವೇತನವು (ಮೂಲವೇತನ ಮತ್ತು ತುಟ್ಟಿಭತ್ಯೆಯ ಒಟ್ಟು ಮೊತ್ತ) ₹ 15 ಸಾವಿರದವರೆಗೆ ಇದ್ದರೆ ಅವರು ಇಪಿಎಸ್‌–95 ವ್ಯಾಪ್ತಿಗೆ ಬರುತ್ತಾರೆ.

‘ಹೆಚ್ಚಿನ ಮೊತ್ತವನ್ನು ನೀಡುವವರಿಗೆ ಹೆಚ್ಚಿನ ಪಿಂಚಣಿ ಇರಬೇಕು ಎಂಬ ಬೇಡಿಕೆಯು ಇಪಿಎಫ್‌ ಸದಸ್ಯರ ಕಡೆಯಿಂದ ಇದೆ. ಹೀಗಾಗಿ, ತಿಂಗಳಿಗೆ ₹ 15 ಸಾವಿರಕ್ಕಿಂತ ಹೆಚ್ಚಿನ ಮೂಲವೇತನ ಪಡೆಯುವವರಿಗೆ ಹೊಸ ಪಿಂಚಣಿ ಯೋಜನೆಯೊಂದನ್ನು ರೂಪಿಸುವ ಬಗ್ಗೆ ಪರಿಶೀಲನೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಇಪಿಎಫ್‌ಒ ಧರ್ಮದರ್ಶಿಗಳ ಮಂಡಳಿಯ ಸಭೆಯು ಮಾರ್ಚ್‌ 11 ಮತ್ತು 12ರಂದು ನಡೆಯಲಿದ್ದು, ಈ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯು ಅಲ್ಲಿ ಚರ್ಚೆಗೆ ಬರಬಹುದು. ಪಿಂಚಣಿಗೆ ಸಂಬಂಧಿಸಿದ ವಿಚಾರಗಳಿಗಾಗಿ ಧರ್ಮದರ್ಶಿಗಳ ಮಂಡಳಿಯು ರಚಿಸಿದ್ದ ಉಪಸಮಿತಿಯು ಈ ಸಭೆಯ ಸಂದರ್ಭದಲ್ಲಿ ವರದಿ ಸಲ್ಲಿಸಲಿದೆ.

ತಿಂಗಳಿಗೆ ₹ 15 ಸಾವಿರಕ್ಕಿಂತ ಹೆಚ್ಚಿನ ಮೂಲವೇತನ ಪಡೆಯುವ ಇಪಿಎಫ್‌ಒ ಚಂದಾದಾರರು, ಇಪಿಎಸ್–95 ಯೋಜನೆಗೆ ಕಡಿಮೆ ಮೊತ್ತ ನೀಡುವ ಅನಿವಾರ್ಯ ಇದೆ (₹ 15 ಸಾವಿರದ ಶೇಕಡ 8.33ರಷ್ಟು ಪಾಲು). ಹೀಗಾಗಿ ಇವರಿಗೆ ಸಿಗುವ ಪಿಂಚಣಿ ಮೊತ್ತವೂ ಕಡಿಮೆ ಇರುತ್ತದೆ. 2014ರಲ್ಲಿ ಜಾರಿಗೆ ಬಂದ ತಿದ್ದುಪಡಿ ನಿಯಮದ ಪ್ರಕಾರ, ₹ 15 ಸಾವಿರಕ್ಕಿಂತ ಹೆಚ್ಚಿನ ಮೂಲವೇತನವು ಪಿಂಚಣಿಗೆ ಪರಿಗಣನೆ ಆಗುವುದಿಲ್ಲ. ಇದು ವ್ಯಕ್ತಿ ಕೆಲಸಕ್ಕೆ ಸೇರುವಾಗ ಇರುವ ವೇತನಕ್ಕೆ ಮಾತ್ರ ಅನ್ವಯ.

ನಂತರದಲ್ಲಿ, ಪಿಂಚಣಿಗೆ ಪರಿಗಣಗೆ ಆಗುವ ಮೂಲವೇತನವನ್ನು ₹ 25 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಬೇಡಿಕೆ ಬಂದಿದೆ. ಆದರೆ ಈ ಕೋರಿಕೆಗೆ ಒಪ್ಪಿಗೆ ದೊರೆತಿಲ್ಲ.

ಪಿಂಚಣಿಗೆ ಅರ್ಹವಾಗುವ ಮೂಲವೇತನಕ್ಕೆ ಮಿತಿ ಇರುವ ವಿಚಾರವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿ ಇದೆ. ಕೇರಳ ಹೈಕೋರ್ಟ್ 2014ರಲ್ಲಿ ನೌಕರರಿಗೆ ಇಪಿಎಸ್–95 ಯೋಜನೆಗೆ ತಮ್ಮ ಮೂಲವೇತನವನ್ನು ಆಧರಿಸಿ ಕೊಡುಗೆ ನೀಡಲು ಅವಕಾಶ ಕಲ್ಪಿಸಿದೆ.

ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಇಪಿಎಫ್‌ಒ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2019ರಲ್ಲಿ ವಜಾಗೊಳಿಸಿತು. ಆದರೆ, 2021ರಲ್ಲಿ ಇಪಿಎಫ್‌ಒ ಸಲ್ಲಿಸಿದ ಪುನರ್‌ ಪರಿಶೀಲನಾ ಅರ್ಜಿಯನ್ನು ಪರಿಗಣಿಸಿ, 2019ರ ವಜಾ ಆದೇಶವನ್ನು ಹಿಂದಕ್ಕೆ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.