ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ವ್ಯಾಪ್ತಿಗೆ ಬರುವ 73 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಏಕಕಾಲಕ್ಕೆ ಪಿಂಚಣಿ ಮೊತ್ತ ವಿತರಣೆ ಮಾಡುವ ಕೇಂದ್ರೀಕೃತ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ.
ಜುಲೈ 29 ಮತ್ತು 30ರಂದು ಇಪಿಎಫ್‌ಇ ಧರ್ಮದರ್ಶಿಗಳ ಮಂಡಳಿಯ ಸಭೆ ನಡೆಯಲಿದ್ದು, ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾವಕ್ಕೆ ಒಪ್ಪಿಗೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈಗ, ದೇಶದಾದ್ಯಂತ ಇರುವ ಇಪಿಎಫ್‌ಒನ 138ಕ್ಕೂ ಅಧಿಕ ಪ್ರಾದೇಶಿಕ ಕಚೇರಿಗಳು ಪಿಂಚಣಿ ಮೊತ್ತವನ್ನು ಪ್ರತ್ಯೇಕವಾಗಿ ವಿತರಿಸುತ್ತಿವೆ. ಇದರಿಂದಾಗಿ ಪಿಂಚಣಿ ವಿತರಣೆಯ ಸಮಯ ಅಥವಾ ದಿನದಲ್ಲಿ ವ್ಯತ್ಯಾಸ ಆಗುತ್ತಿದೆ. ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ತರುವುದರಿಂದ ಒಂದೇ ಸಮಯ ಅಥವಾ ದಿನದಲ್ಲಿಎಲ್ಲಾ ಪಿಂಚಣಿದಾರರಿಗೆ ಪಿಂಚಣಿ ಪಾವತಿ ಆಗಲಿದೆ.
ಪಿಎಫ್ ಖಾತೆಗಳು ನಕಲು ಆಗದಂತೆ ತಡೆಯಲು ಮತ್ತು ಯಾವುದೇ ಸದಸ್ಯನ ಒಂದಕ್ಕಿಂತ ಹೆಚ್ಚಿನ ಪಿಎಫ್ ಖಾತೆಗಳ ವಿಲೀನವು ಇದರಿಂದ ಸುಲಭವಾಗಲಿದೆ. ನೌಕರ ಉದ್ಯೋಗ ಬದಲಿಸಿದ ಸಂದರ್ಭದಲ್ಲಿ ಪಿಎಫ್ ಖಾತೆ ವರ್ಗಾಯಿಸಬೇಕಾದ ಅಗತ್ಯವನ್ನೂ ಇದು ತಪ್ಪಿಸಲಿದೆ.
ಮಾಹಿತಿ ತಂತ್ರಜ್ಞಾನ ಆಧಾರಿತ ಕೇಂದ್ರೀಕೃತ ವ್ಯವಸ್ಥೆ ಅಭಿವೃದ್ಧಿಪಡಿಸಲು ಸಿ–ಡಾಕ್ ಕಂಪನಿಗೆ 2021ರ ನವೆಂಬರ್ 20ರಂದು ನಡೆದಿದ್ದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು.
ಆರು ತಿಂಗಳಿಗಿಂತಲೂ ಕಡಿಮೆ ಅವಧಿಗೆ ಪಿಎಫ್ ಪಿಂಚಣಿ ಖಾತೆಗೆ ಹಣ ಭರ್ತಿ ಮಾಡಿದವರಿಗೂ ಹಣ ಹಿಂದಕ್ಕೆ ಪಡೆಯಲು ಅವಕಾಶ ಕಲ್ಪಿಸುವ ಪ್ರಸ್ತಾವವನ್ನು ಧರ್ಮದರ್ಶಿಗಳ ಮಂಡಳಿಯು ಪರಿಗಣಿಸಲಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.