ನವದೆಹಲಿ: ಬ್ಯಾಟರಿ ಉತ್ಪನ್ನಗಳ ತಯಾರಿಕಾ ಕಂಪನಿ ಎಪ್ಸಿಲಾನ್ ಅಡ್ವಾನ್ಸ್ಡ್ ಮೆಟಿರೀಯಲ್ಸ್, ಕರ್ನಾಟಕದಲ್ಲಿ ವಾರ್ಷಿಕ 90 ಸಾವಿರ ಟನ್ ಉತ್ಪಾದನಾ ಸಾಮರ್ಥ್ಯದ ಆನೋಡ್ ಘಟಕ ಸ್ಥಾಪನೆಗೆ ನಿರ್ಧರಿಸಿದ್ದು, ಇದಕ್ಕಾಗಿ ₹9 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಮುಂದಾಗಿದೆ.
ಮೊದಲ ಹಂತದಲ್ಲಿ 2026ರ ಅಂತ್ಯಕ್ಕೆ 30 ಸಾವಿರ ಟನ್ ಸಾಮರ್ಥ್ಯದ ಆನೋಡ್ ಘಟಕ ನಿರ್ಮಿಸಲಾಗುತ್ತದೆ. ಇದಕ್ಕಾಗಿ ₹4 ಸಾವಿರ ಹೂಡಿಕೆ ಮಾಡಲಾಗುವುದು ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಹಂಡಾ ತಿಳಿಸಿದ್ದಾರೆ.
ಎರಡನೇ ಹಂತದಲ್ಲಿ 2031ರ ವೇಳೆಗೆ ಘಟಕವನ್ನು 90 ಸಾವಿರ ಟನ್ ಸಾಮರ್ಥ್ಯಕ್ಕೆ ವಿಸ್ತರಿಸಲಾಗುವುದು. ಇದಕ್ಕಾಗಿ ₹5 ಸಾವಿರ ಹೂಡಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ, ಬ್ಯಾಟರಿ ಘಟಕಗಳ ಸ್ಥಾಪನೆಗೆ ಸೆಲ್ ತಯಾರಿಕಾ ಕಂಪನಿಗಳ ಅಗತ್ಯತೆ ಹೆಚ್ಚಿದೆ. ಈ ಕಂಪನಿಗಳಿಗೆ ಎಪ್ಸಿಲಾನ್, ಆನೋಡ್ ಮತ್ತು ಕ್ಯಾಥೋಡ್ ಪೂರೈಸುವ ವಿಶ್ವಾಸಾರ್ಹ ಪೂರೈಕೆದಾರನಾಗಲಿದೆ ಎಂದು ತಿಳಿಸಿದ್ದಾರೆ.
ಮುಂದಿನ ಎಂಟು ತಿಂಗಳಿನಲ್ಲಿ ಘಟಕ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತದೆ. ಒಂದೂವರೆ ವರ್ಷದಲ್ಲಿ ಘಟಕ ನಿರ್ಮಾಣವಾಗಲಿದೆ. 2026ರ ಅಂತ್ಯಕ್ಕೆ ಅಥವಾ 2027ರ ಆರಂಭದಲ್ಲಿ ಮಾರುಕಟ್ಟೆಗೆ ಉತ್ಪನ್ನಗಳನ್ನು ಪೂರೈಸಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಎಪ್ಸಿಲಾನ್ ಮಾತೃಸಂಸ್ಥೆಯಾದ ಎಪ್ಸಿಲಾನ್ ಕಾರ್ಬನ್ ಈಗಾಗಲೇ ಕರ್ನಾಟಕದಲ್ಲಿ ಕಾರ್ಬನ್ ಬ್ಲಾಕ್ ಘಟಕ ಸ್ಥಾಪಿಸಿ ಉತ್ಪಾದನೆಯನ್ನು ಆರಂಭಿಸಿದೆ. ಇಲ್ಲಿ 1,100 ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಡಿಶಾದಲ್ಲಿ ಕಂಪನಿಯು ಹೊಸ ನಿರ್ಮಾಣ ಯೋಜನೆ ಆರಂಭಿಸಿದ್ದು, ₹10 ಸಾವಿರ ಕೋಟಿ ಹೂಡಿಕೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.