ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ (ಎಂ.ಎಫ್) ಮಾರುಕಟ್ಟೆಯಲ್ಲಿ ₹41,887 ಕೋಟಿ ಬಂಡವಾಳ ಹೂಡಿಕೆಯಾಗಿದೆ.
ಸೆಪ್ಟೆಂಬರ್‌ನಲ್ಲಿ ₹34,419 ಕೋಟಿ ಹೂಡಿಕೆಯಾಗಿತ್ತು. ಈ ಹೂಡಿಕೆಗೆ ಹೋಲಿಸಿದರೆ ಶೇ 21ರಷ್ಟು ಏರಿಕೆಯಾಗಿದೆ. ಲಾರ್ಜ್‌ಕ್ಯಾಪ್ ಫಂಡ್‌ಗಳಲ್ಲಿ ಹೆಚ್ಚಿದ ಹೂಡಿಕೆಯಿಂದ ಒಳಹರಿವು ಪ್ರಮಾಣ ಏರಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಸೋಮವಾರ ತಿಳಿಸಿದೆ. ಜೂನ್‌ನಲ್ಲಿ ₹40,608 ಕೋಟಿ ಹೂಡಿಕೆಯಾಗಿತ್ತು.
ಎಸ್‌ಐಪಿ ಪ್ರಮಾಣ ಏರಿಕೆ: ಅಕ್ಟೋಬರ್‌ನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆಯಡಿ (ಎಸ್‌ಐಪಿ) ₹25,323 ಕೋಟಿ ಹೂಡಿಕೆಯಾಗಿದ್ದು, ಇದು ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ಸೆಪ್ಟೆಂಬರ್‌ನಲ್ಲಿ ₹24,509 ಕೋಟಿ ಹೂಡಿಕೆಯಾಗಿತ್ತು. ಹೂಡಿಕೆದಾರರಲ್ಲಿ ಎಸ್‌ಐಪಿಯತ್ತ ಒಲವು ಹೆಚ್ಚಿದೆ ಎಂದು ತಿಳಿಸಿದೆ.
‘ಇದು ಶಿಸ್ತುಬದ್ಧ ಮತ್ತು ದೀರ್ಘಾವಧಿಯ ಸಂಪತ್ತು ಕ್ರೋಡೀಕರಣದತ್ತ ಹೂಡಿಕೆದಾರರ ಮನೋಭಾವ ಬದಲಾಗುತ್ತಿರುವುದನ್ನು ತೋರಿಸುತ್ತದೆ’ ಎಂದು ಎಎಂಎಫ್‌ಐನ ಮುಖ್ಯ ಕಾರ್ಯನಿರ್ವಾಹಕ ವೆಂಕಟ್ ಚಲಸಾನಿ ಹೇಳಿದ್ದಾರೆ.
ಒಟ್ಟಾರೆ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ₹2.4 ಲಕ್ಷ ಕೋಟಿ ಬಂಡವಾಳ ಒಳಹರಿವು ಆಗಿದೆ. ಸೆಪ್ಟೆಂಬರ್‌ನಲ್ಲಿ ₹71,114 ಕೋಟಿ ಹೊರಹರಿವಾಗಿತ್ತು. ಇದೇ ಅವಧಿಯಲ್ಲಿ ಸಾಲಪತ್ರದ ಮಾರುಕಟ್ಟೆಗಳಲ್ಲಿ ₹1.57 ಲಕ್ಷ ಕೋಟಿ ಹೂಡಿಕೆಯಾಗಿದೆ.
ಅಕ್ಟೋಬರ್‌ನಲ್ಲಿ ಈ ಉದ್ಯಮದ ಸಂಪತ್ತಿನ ನಿರ್ವಹಣಾ ಮೌಲ್ಯವು (ಎಯುಎಂ) ₹67.25 ಲಕ್ಷ ಕೋಟಿಯಷ್ಟಿದೆ. ಸೆಪ್ಟೆಂಬರ್‌ನಲ್ಲಿ ₹67 ಲಕ್ಷ ಕೋಟಿ ಇತ್ತು ಎಂದು ತಿಳಿಸಿದೆ.
‘ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೂಡಿಕೆಗೆ ಯುವಜನರ ಒಲವು’
ನವದೆಹಲಿ (ಪಿಟಿಐ): ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಬದಲು, ಈಕ್ವಿಟಿ ಮಾರುಕಟ್ಟೆಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಯುವಜನರು ಆದ್ಯತೆ ನೀಡುತ್ತಿದ್ದಾರೆ ಎಂದು ಎಂದು ಬ್ರೋಕರೇಜ್ ಕಂಪನಿ ಏಂಜೆಲ್ ಒನ್‌ನ ಫಿನ್ ಒನ್ ವರದಿ ಸೋಮವಾರ ತಿಳಿಸಿದೆ.
ಶೇ 93ರಷ್ಟು ಯುವಜನರು ಉಳಿತಾಯ ಮಾಡುತ್ತಿದ್ದು, ಇವರಲ್ಲಿ ಹೆಚ್ಚಿನವರು ತಮ್ಮ ತಿಂಗಳ ವೇತನದ ಶೇ 20ರಿಂದ ಶೇ 30ರಷ್ಟು ಉಳಿತಾಯ ಮಾಡುತ್ತಿದ್ದಾರೆ ಎಂದು ತಿಳಿಸಿದೆ. ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ 45ರಷ್ಟು ಜನ ನಿಶ್ಚಿತ ಠೇವಣಿ (ಎಫ್.ಡಿ) ಅಥವಾ ಚಿನ್ನದಲ್ಲಿ ಹೂಡಿಕೆ ಮಾಡಲು ಒಲವು ತೋರುತ್ತಿದ್ದಾರೆ.
ಶೇ 58ರಷ್ಟು ಯುವಜನರು ಷೇರುಗಳಲ್ಲಿ ಹೂಡಿಕೆ ಮಾಡಿದರೆ, ಶೇ 39ರಷ್ಟು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಸುರಕ್ಷತೆಯ ಆಯ್ಕೆಗಳಾದ ನಿಶ್ಚಿತ ಠೇವಣಿ ಶೇ 22 ಮತ್ತು ಆರ್.ಡಿ ಶೇ 26ರಷ್ಟಿದೆ ಎಂದು ವರದಿಯಲ್ಲಿ ತಿಳಿಸಿದೆ.
ಸಮೀಕ್ಷೆಯು ದೇಶದ 13ಕ್ಕೂ ಹೆಚ್ಚು ನಗರಗಳಲ್ಲಿ 1,600 ಯುವಜನರಿಂದ ಮಾಹಿತಿ ಸಂಗ್ರಹಿಸಿ, ವರದಿ ಸಿದ್ಧಪಡಿಸಿದೆ.
ಆಹಾರ, ಸಾರಿಗೆಯಂತಹ ಪ್ರಮುಖ ಅಂಶಗಳ ವೆಚ್ಚದಲ್ಲಿನ ಏರಿಕೆಯು ಉಳಿತಾಯಕ್ಕೆ ಅಡ್ಡಿಯಾಗಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 85ರಷ್ಟು ಯುವಜನರು ತಿಳಿಸಿದ್ದಾರೆ. ಹೆಚ್ಚುತ್ತಿರುವ ಜೀವನ ವೆಚ್ಚವು ದೇಶದ ಯುವಜನರಿಗೆ ಪ್ರಮುಖ ಸವಾಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.