ನವದೆಹಲಿ: ರಿಲಯನ್ಸ್ ಕಮ್ಯುನಿಕೇಶನ್ಸ್ ಕಂಪನಿಯ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ಎರಿಕ್ಸನ್ ಕಂಪನಿ ದಾಖಲಿಸಿದ್ದ ಪ್ರಕರಣದಲ್ಲಿ ಅನಿಲ್ ಅಂಬಾನಿ ಮತ್ತು ರಿಲಯನ್ಸ್ ಕಂಪನಿಯ ಇಬ್ಬರು ನಿರ್ದೇಶಕರು ತಪ್ಪಿತಸ್ಥರು ಎಂದು ಸುಪ್ರೀಂಕೋರ್ಟ್ ಹೇಳಿದೆ.
ರಿಲಯನ್ಸ್ ಕಮ್ಯುನಿಕೇಶನ್ಸ್ ₹550 ಕೋಟಿಬಾಕಿ ಹಣ ಕೊಟ್ಟಿಲ್ಲ ಎಂದು ಸ್ವೀಡನ್ ಮೂಲದ ಎರಿಕ್ಸನ್ ಕಂಪನಿಯು ಆರೋಪಿಸಿತ್ತು. ಈ ಪ್ರಕರಣ ಬಗ್ಗೆ ಬುಧವಾರ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.
ಅಂಬಾನಿ ಜತೆ ರಿಲಯನ್ಸ್ ಟೆಲಿಕಾಂ ಮುಖ್ಯಸ್ಥ ಸತೀಶ್ ಸೇತ್ ಮತ್ತು ರಿಲಯನ್ಸ್ ಇನ್‍ಫ್ರಾಟೆಲ್ ಮುಖ್ಯಸ್ಥ ಚಯ್ಯಾ ವಿರಾನಿ ಅವರನ್ನೂ ತಪ್ಪಿತಸ್ಥರು ಎಂದು ಕೋರ್ಟ್ ಹೇಳಿದೆ.
ಅನಿಲ್ ಅಂಬಾನಿ ಮತ್ತು ಈ ಇಬ್ಬರು ನಿರ್ದೇಶಕರು ಎರಿಕ್ಸನ್ ಇಂಡಿಯಾ ಕಂಪನಿಗೆ ನಾಲ್ಕು ತಿಂಗಳೊಳಗೆ ₹453 ಕೋಟಿ ಪಾವತಿ ಮಾಡಬೇಕು. ಹಣ ಪಾವತಿ ಮಾಡದೇ ಇದ್ದರೆ ಕನಿಷ್ಠ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದ ಸುಪ್ರೀಂಕೋರ್ಟ್ ಮೂವರಿಗೂ ತಲಾ ₹1 ಕೋಟಿ ದಂಡ ವಿಧಿಸಿದೆ.ದಂಡ ವಿಧಿಸದೇ ಇದ್ದರೆ ಒಂದು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ.
ರಿಲಯನ್ಸ್ ಕಂಪನಿಗೆ ರಫೇಲ್ ವಿಮಾನ ಒಪ್ಪಂದದಲ್ಲಿ ಹೂಡಲು ಹಣವಿದೆ.ಆದರೆ ನಮಗೆ ಬಾಕಿ ಪಾವತಿಸಲು ದುಡ್ಡಿಲ್ಲ ಎಂದು ಎರಿಕ್ಸನ್ ಕಂಪನಿ ರಿಲಯನ್ಸ್ ಗ್ರೂಪ್ ವಿರುದ್ಧ ಆರೋಪ ಮಾಡಿತ್ತು. ಈ ಪ್ರಕರಣದ ವಿಚಾರಣೆಯನ್ನು ಫೆಬ್ರುವರಿ 13ರಂದು ನ್ಯಾಯಮೂರ್ತಿ ಆರ್.ಎಫ್ ನಾರಿಮನ್ ಮತ್ತು ವಿನೀತ್ ಸರಣ್ ಅವರ ನ್ಯಾಯಪೀಠವು ಕಾಯ್ದಿರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.