ನವದೆಹಲಿ: ಇಎಸ್‌ಐ ಆರೋಗ್ಯ ವಿಮೆ ಹೊಂದಿರುವವರಿಗೆ ತಮ್ಮ ನಿವಾಸದ 10 ಕಿ.ಮೀ. ಸುತ್ತಳತೆಯಲ್ಲಿ ಇಎಸ್‌ಐ ಆಸ್ಪತ್ರೆ ಇಲ್ಲದಿದ್ದರೆ, ನೌಕರರ ರಾಜ್ಯ ವಿಮೆ ನಿಗಮದ ಜೊತೆ ಒಪ್ಪಂದ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ಅವರು ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬಹುದು.
ಇಎಸ್‌ಐ ವಿಮೆ ವ್ಯಾಪ್ತಿಗೆ ಬರುವ ನೌಕರರ ಸಂಖ್ಯೆಯಲ್ಲಿ ಹೆಚ್ಚಳ ಆಗಿರುವುದನ್ನು ಪರಿಗಣಿಸಿ, ಅಂತಹ ನೌಕರರ ನಿವಾಸದ ಸಮೀಪದಲ್ಲೇ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಇಎಸ್‌ಐನ ಮೂಲಸೌಕರ್ಯ ಹೆಚ್ಚಿಸುವ ಪ್ರಯತ್ನ ನಡೆದಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಪ್ರಕಟಣೆ ಹೇಳಿದೆ.
ಇಎಸ್‌ಐ ವಿಮೆ ಹೊಂದಿರುವವರು ಇಎಸ್‌ಐ ಜೊತೆ ಒಪ್ಪಂದ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗೆ ಇಎಸ್‌ಐ ಇ–ಪೆಹಚಾನ್ ಕಾರ್ಡ್ ಅಥವಾ ಆರೋಗ್ಯ ಪಾಸ್‌ಬುಕ್ ಒಯ್ಯಬೇಕು. ಜೊತೆಯಲ್ಲೇ, ಆಧಾರ್ ಅಥವಾ ಸರ್ಕಾರ ನೀಡಿರುವ ಯಾವುದಾದರೂ ಇತರ ಗುರುತಿನ ಚೀಟಿ ಒಯ್ಯಬೇಕು. ಅವರು ಒಪಿಡಿ ಸೇವೆಗಳನ್ನು ನಗದುರಹಿತವಾಗಿ ಪಡೆದುಕೊಳ್ಳಬಹುದು.
ವೈದ್ಯರು ಹೇಳುವ ಔಷಧಕ್ಕೆ ಪಾವತಿಸಿದ ಹಣವನ್ನು, ಇಎಸ್‌ಐನ ಹತ್ತಿರದ ಶಾಖೆ ಅಥವಾ ಪ್ರಾದೇಶಿಕ ಕಚೇರಿಯಿಂದ ಮರಳಿ ಪಡೆಯಬಹುದು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದಲ್ಲಿ, ನಗದು ರಹಿತವಾಗಿ ಸೇವೆ ಪಡೆಯಲು ಅಗತ್ಯವಿರುವ ಒಪ್ಪಿಗೆಯನ್ನು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಆನ್‌ಲೈನ್ ವ್ಯವಸ್ಥೆಯ ಮೂಲಕ 24 ಗಂಟೆಗಳಲ್ಲಿ ಇಎಸ್‌ಐನಿಂದ ಪಡೆದುಕೊಳ್ಳಲಿದ್ದಾರೆ ಎಂದು ಪ್ರಕಟಣೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.