ನವದೆಹಲಿ: ದೇಶದಲ್ಲಿ 2025ರ ವೇಳೆಗೆ ವಿದ್ಯುತ್ ಚಾಲಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಬಳಕೆ ಜಾರಿಗೆ ತರುವುದು ಅವಾಸ್ತವಿಕ ಎಂದು ಬಜಾಜ್ ಆಟೊ ಮತ್ತು ಟಿವಿಎಸ್ ಕಂಪನಿಗಳು ಅಭಿಪ್ರಾಯಪಟ್ಟಿವೆ.
ಸರ್ಕಾರದ ಈ ನಿರ್ಧಾರವು ವಾಹನ ಉದ್ಯಮಕ್ಕೆ ಮಾರಕವಾಗಿ ಪರಿಣಮಿಸಲಿದ್ದು, ಉದ್ಯೋಗ ಸೃಷ್ಟಿಗೂ ಹಿನ್ನಡೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿವೆ.
ಇಂಟರ್‌ನ್ಯಾಷನಲ್ ಕಂಬಸ್ಟನ್ ಎಂಜಿನ್ (ಐಸಿಇ) ಇರುವ ಮೂರು ಚಕ್ರಗಳ ವಾಹನಗಳನ್ನು 2023ರ ಒಳಗೆ ಹಾಗು 150 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನು 2025ರ ಒಳಗಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವ ಬಗ್ಗೆ ಕಂಪನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
‘ಕೇಂದ್ರ ಸರ್ಕಾರದ ಯೋಜನೆ ಸಮರ್ಪಕವಾಗಿಲ್ಲ. ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಅನೇಕರಿಗೆ ಯಾವುದೇ ಅನುಭವ ಇಲ್ಲ’ ಎಂದು ಬಜಾಜ್ ಆಟೊದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಹೇಳಿದ್ದಾರೆ.
‘ಬಿಎಸ್–6 ಅಳವಡಿಕೆಗೆ ಗಡುವು ನಿಗದಿ ಮಾಡುವುದು ಸೂಕ್ತವಲ್ಲ. ಎಲ್ಲದಕ್ಕೂ ಮುಖ್ಯವಾಗಿ ಕೇವಲ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನೇ ಗುರಿಯಾಗಿಸಿಕೊಂಡು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಕಾರುಗಳು ಮತ್ತು ಇತರೆ ವಾಹನಗಳನ್ನು ಪರಿಗಣಿಸಲಾಗಿಲ್ಲ. ಹೀಗಾಗಿ ಇದೊಂದು ಪರಿಪೂರ್ಣವಲ್ಲದ ಕ್ರಮವಾಗಿದೆ’ ಎಂದು ಟೀಕಿಸಿದ್ದಾರೆ.
‘ವಿದ್ಯುತ್ ಚಾಲಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಬಳಕೆಗೆ ತರಲು ಅವಾಸ್ತವಿಕವಾದ ಗಡುವನ್ನು
ಒತ್ತಾಯಪೂರ್ವಕವಾಗಿ ಹೇರುವುದು ಸರಿಯಲ್ಲ. ಇದರಿಂದ ವಾಹನ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಉದ್ಯೋಗ ಸೃಷ್ಟಿಗೂ ಅಡ್ಡಿಯಾಗಲಿದೆ’ ಎಂದು ಟಿವಿಎಸ್ ಮೋಟರ್ ಕಂಪನಿಯ ಅಧ್ಯಕ್ಷ ವೇಣು ಶ್ರೀನಿವಾಸನ್ ಅಭಿಪ್ರಾಯಪಟ್ಟಿದ್ದಾರೆ.
ಸೂಕ್ತ ಕಾರ್ಯಸೂಚಿ ಅಗತ್ಯ: ವಿದ್ಯುತ್ ಚಾಲಿತ ವಾಹನಗಳ ಅಳವಡಿಕೆಗೆ ಕಾಲಮಿತಿ ನಿಗದಿಪಡಿಸುವ ಮುನ್ನ ಸಾಕಷ್ಟು ಸಲಹೆ ಸೂಚನೆಗಳನ್ನು ಪಡೆಯುವ ಅಗತ್ಯವಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟವೂ (ಸಿಐಐ) ಅಭಿಪ್ರಾಯಪಟ್ಟಿದೆ.
ಸರಿಯಾದ ಕಾರ್ಯಸೂಚಿ ಇರುವ ಮತ್ತು ವಾಸ್ತವಿಕವಾದ ಕಾಲಮಿತಿಯೊಳಗೆ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಅವಕಾಶ ನೀಡುವಂತೆ ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟವು (ಎಸ್‌ಐಎಎಂ) ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಬಿಎಸ್–6 ಪ್ರಮಾಣ ಪತ್ರ
ಹೀರೊ ಮೋಟೊಕಾರ್ಪ್‌ನ ಸ್ಪ್ಲೆಂಡರ್ ಐಸ್ಮಾರ್ಟ್ ಮಾದರಿಗೆ ಬಿಎಸ್–6 ಪ್ರಮಾಣಪತ್ರ ದೊರೆತಿದೆ.
ಈ ಪ್ರಮಾಣ ಪತ್ರ ಪಡೆದ ಮೊದಲ ದ್ವಿಚಕ್ರವಾಹನ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಆಟೊಮೋಟಿವ್ ಟೆಕ್ನಾಲಜಿಯ (ಐಸಿಎಟಿ) ನಿರ್ದೇಶಕ ದಿನೇಶ್ ತ್ಯಾಗಿ ಅವರುಕಂಪನಿಯ ಹಿರಿಯ ಅಧಿಕಾರಿಗಳಿಗೆಪ್ರಮಾಣ ಪತ್ರವನ್ನು ನೀಡಿದ್ದಾರೆ.
ಮಾರುತಿ ಆಲ್ಟೊ, ಹೋಂಡಾ ಸಿವಿಕ್ ಮತ್ತು ಬಿಎಂಡಬ್ಲ್ಯುನ ಕೆಲವು ಮಾದರಿಗಳಿಗೂ ಪ್ರಮಾಣ ಪತ್ರ ನೀಡಲಾಗಿದೆ. ವಿದ್ಯುತ್ ಚಾಲಿತ ದ್ವಿಚಕ್ರ, ತ್ರಿಚಕ್ರ, ವಾಣಿಜ್ಯ ವಾಹನ ಮತ್ತು ರಿಕ್ಷಾಗಳಿಗೆ ವಿದ್ಯುತ್ ಚಾಲಿತ ಪ್ರಮಾಣಪತ್ರ ನೀಡಿರುವುದಾಗಿ ತ್ಯಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.