ಮುಂಬೈ: ದೇಶದಲ್ಲಿ ಅಕ್ರಮವಾಗಿ ಸಾಲ ನೀಡುವ ಆ್ಯಪ್‌ಗಳನ್ನು ನಿಯಂತ್ರಿಸುವ ಉದ್ದೇಶದಿಂದ, ಗೂಗಲ್ ಕಂಪನಿಯು ತನ್ನ ಪರಿಶೀಲನಾ ಪ್ರಕ್ರಿಯೆಯನ್ನು ಇನ್ನಷ್ಟು ಕಠಿಣವಾಗಿಸಬೇಕು ಎಂದು ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸೂಚಿಸಿವೆ.
ದೇಶದಲ್ಲಿ ಗೂಗಲ್ ಕಂಪನಿಯು ಆರ್‌ಬಿಐ ರೂಪಿಸಿದ ನಿಯಮಗಳ ಅಡಿಯಲ್ಲಿ ವ್ಯವಹಾರ ನಡೆಸುತ್ತಿಲ್ಲ. ಹೀಗಿದ್ದರೂ, ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡೆಸಿದ ಹಲವು ಸಭೆಗಳಿಗೆ ಹಾಜರಾಗುವಂತೆ ಗೂಗಲ್‌ಗೆ ಈಚಿನ ಕೆಲವು ತಿಂಗಳಲ್ಲಿ ಸೂಚಿಸಲಾಗಿತ್ತು. ಅಕ್ರಮ ಸಾಲ ಆ್ಯಪ್‌ಗಳನ್ನು ನಿರ್ಮೂಲಗೊಳಿಸಲು ನೆರವಾಗುವ ರೀತಿಯಲ್ಲಿ ಕಂಪನಿಯು ಕಠಿಣ ನಿಯಮಗಳನ್ನು ರೂಪಿಸಬೇಕು ಎಂದು ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ಲೇಸ್ಟೋರ್ ಹಾಗೂ ಹಣಕಾಸು ಸೇವಾ ಆ್ಯಪ್‌ಗಳಿಗೆ ಸಂಬಂಧಿಸಿದ ನಿಯಮಗಳನ್ನು 2021ರ ಸೆಪ್ಟೆಂಬರ್‌ನಿಂದ ಅನ್ವಯಿಸುವಂತೆ ಪರಿಷ್ಕರಿಸಲಾಗಿದೆ ಎಂದು ಗೂಗಲ್ ಹೇಳಿದೆ. ‘ವೈಯಕ್ತಿಕ ಸಾಲ ನೀಡುವ ಎರಡು ಸಾವಿರಕ್ಕೂ ಹೆಚ್ಚಿನ ಆ್ಯಪ್‌ಗಳನ್ನು ನಾವು ಪ್ಲೇಸ್ಟೋರ್‌ನಿಂದ ತೆಗೆದಿದ್ದೇವೆ. ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂದ ಕಾರಣ ಹೀಗೆ ಮಾಡಲಾಗಿದೆ’ ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಕಡೆಯಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಇತರ ವೆಬ್‌ಸೈಟ್‌ಗಳು ಮತ್ತು ಬೇರೆ ಮೂಲಗಳಿಂದ ಇಂತಹ ಆ್ಯಪ್‌ಗಳು ಲಭ್ಯವಾಗುವುದನ್ನು ತಡೆಯುವ ಬಗ್ಗೆಯೂ ಗಮನ ಹರಿಸುವಂತೆ ಗೂಗಲ್‌ಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ವಿವರಿಸಿವೆ. ಉದ್ಯಮದ ವಲಯದಿಂದ ಬರುವ ದೂರುಗಳನ್ನು ಆಧರಿಸಿ ಕ್ರಮ ಜರುಗಿಸುವುದನ್ನು ಗೂಗಲ್ ಆರಂಭಿಸಿದೆ.
‘ನಿರ್ದಿಷ್ಟ ಆ್ಯಪ್‌ಗಳ ಬಗ್ಗೆ ದೂರು ನೀಡಿದಾಗ ಗೂಗಲ್ ಈ ಮೊದಲು ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದರೆ ಈಗ ಕಂಪನಿಯು ಹೆಚ್ಚು ಸ್ಪಂದನಶೀಲವಾಗಿದೆ’ ಎನ್ನಲಾಗಿದೆ. ಸಾಲ ಕೊಡಲು ಮಾನ್ಯತೆ ಪಡೆದಿರುವ ಆ್ಯಪ್‌ಗಳ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸ ಆರ್‌ಬಿಐ ಹಾಗೂ ಸರ್ಕಾರದ ಮಟ್ಟದಲ್ಲಿ ನಡೆದಿದೆ.
ದೇಶದ ಆ್ಯಪ್ ಮಾರುಕಟ್ಟೆಯಲ್ಲಿ ಗೂಗಲ್ ಪ್ರಾಬಲ್ಯ ಹೊಂದಿದೆ. ದೇಶದ ಶೇಕಡ 95ರಷ್ಟು ಸ್ಮಾರ್ಟ್‌ಫೋನ್‌ಗಳು ಗೂಗಲ್ ಅಭಿವೃದ್ಧಿಪಡಿಸಿರುವ ಆ್ಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯನ್ನು ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.