ನವದೆಹಲಿ: ‘ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ರೂಪಿಸಿರುವ ಹೊಸ ಎಲೆಕ್ಟ್ರಿಕ್ ವಾಹನ ನೀತಿಗೆ ವಿಶ್ವದ ಹಲವು ಆಟೊಮೊಬೈಲ್ ಕಂಪನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ’ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (ಡಿಪಿಐಐಟಿ) ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ವಾರ್ಷಿಕ ವ್ಯಾಪಾರ ಶೃಂಗದಲ್ಲಿ ಶನಿವಾರ ಮಾತನಾಡಿದ ಅವರು, ‘ದೇಶದಲ್ಲಿ ಬಂಡವಾಳ ಹೂಡಿಕೆ ಮಾಡಿ ಇ.ವಿ ತಯಾರಿಕಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಆಮದು ಸುಂಕದಲ್ಲಿ ರಿಯಾಯಿತಿ ಪ್ರಕಟಿಸಲಾಗಿದೆ’ ಎಂದು ಹೇಳಿದರು.
‘ಪ್ರತಿಯೊಬ್ಬರು ಒಂದೇ ಕಂಪನಿ (ಅಮೆರಿಕದ ಟೆಸ್ಲಾ) ಬಗ್ಗೆಯಷ್ಟೇ ಮಾತನಾಡುತ್ತಾರೆ. ಕೇಂದ್ರದ ನೀತಿಯು ಉತ್ತಮವಾಗಿದ್ದು, ಕಂಪನಿಗಳಿಗೆ ಪೂರಕವಾಗಿದೆ. ಹಾಗಾಗಿ, ಹಲವು ಕಂಪನಿಗಳು ಸ್ಪಂದಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದರು.
ಹೊಸ ನೀತಿ ಅನ್ವಯ ಆಮದು ಸುಂಕದ ಪ್ರಯೋಜನ ಪಡೆಯಲು ಕಂಪನಿಗಳು ದೇಶದಲ್ಲಿ ಕನಿಷ್ಠ ₹4,150 ಕೋಟಿ ಬಂಡವಾಳ ಹೂಡಿಕೆ ಮಾಡಿ ಇ.ವಿ ತಯಾರಿಕಾ ಘಟಕ ಸ್ಥಾಪಿಸಬೇಕಿದೆ. ಟೆಸ್ಲಾದಂತಹ ಕಂಪನಿಗಳನ್ನು ಭಾರತದತ್ತ ಸೆಳೆಯಲು ಈ ನೀತಿ ನೆರವಾಗಲಿದೆ ಎಂದು ಹೇಳಲಾಗಿತ್ತು.
‘ಸರ್ಕಾರವು ಈಗಾಗಲೇ ಟೈರ್ ಉತ್ಪಾದಿಸುವ ಎರಡು ಬಹುರಾಷ್ಟ್ರೀಯ ಕಂಪನಿಗಳ ಜೊತೆಗೆ ಚರ್ಚಿಸಿದೆ. ಟೈರ್ ತಯಾರಿಕೆಗೆ ಸಂಬಂಧಿಸಿದ ಸರಕುಗಳ ಆಮದಿಗೆ ವಿಧಿಸಿರುವ ನಿರ್ಬಂಧ ಹಿಂಪಡೆಯಲು ಕೋರಿವೆ. ಇದಕ್ಕೆ ಸರ್ಕಾರವೂ ಒಪ್ಪಿಗೆ ನೀಡಿದ್ದು, ಭಾರತದಲ್ಲಿ ತಯಾರಿಕೆಗೆ ಒತ್ತು ನೀಡುವಂತೆ ಸೂಚಿಸಿದೆ. ಇದಕ್ಕೆ ಕಂಪನಿಗಳು ಸಮ್ಮತಿಸಿದರೆ ನಿರ್ಬಂಧಗಳನ್ನು ತೆರವುಗೊಳಿಸುತ್ತೇವೆ’ ಎಂದರು.
ಭಾರತಕ್ಕೆ ಮಾಹಿತಿ ನೀಡದ ಟೆಸ್ಲಾ
ನವದೆಹಲಿ (ಪಿಟಿಐ): ‘ಭಾರತದಲ್ಲಿ ತನ್ನ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯು ಇಲ್ಲಿಯವರೆಗೂ ಕೇಂದ್ರಕ್ಕೆ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಪ್ರಿಲ್‌ನ ಕೊನೆಯ ವಾರದಲ್ಲಿ ಮಸ್ಲ್ ಅವರು ಭಾರತದ ಪ್ರವಾಸವನ್ನು ಏಕಾಏಕಿ ರದ್ದುಪಡಿಸಿದ್ದು ಸುದ್ದಿಯಾಗಿತ್ತು. ‘ಅವರು (ಟೆಸ್ಲಾ) ಸದ್ಯ ಮೌನವಾಗಿದ್ದಾರೆ. ಎಲ್ಲ ಆಟೊಮೊಬೈಲ್ ಕಂಪನಿಗಳಿಗೆ ಅನುಕೂಲವಾಗುವಂತೆಯೇ ಇ.ವಿ ನೀತಿ ರೂಪಿಸಲಾಗಿದೆ. ವಾಣಿಜ್ಯ ನಿರ್ಧಾರಗಳನ್ನು ಆಯಾ ಕಂಪನಿಗಳೇ ತೆಗೆದುಕೊಳ್ಳಬೇಕಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.