ವಿಶ್ವಸಂಸ್ಥೆ : ‘ಆ ಪಟ್ಟಣದ ಹೆಸರು ನಿಶ್. ಬಲ್ಗೇರಿಯಾ ಹಾಗೂ ಸರ್ಬಿಯಾದ ಗಡಿಭಾಗದಲ್ಲಿದೆ. ನಾನು 50 ವರ್ಷಗಳ ಹಿಂದೆ ಅಲ್ಲಿದ್ದೆ. ಅಲ್ಲಿನ ರಸ್ತೆಗಳಲ್ಲಿ ಸಂಚರಿಸುವಾಗ ಅಪರಿಚಿತ ವಾಹನಗಳ ಸಹಾಯದಿಂದ ಪ್ರಯಾಣಿಸುತ್ತಿದ್ದೆ (ಹಿಚ್‌ಹೈಕಿಂಗ್). ಆ ವೇಳೆ ಸತತ 120 ಗಂಟೆ ಕಾಲ ಹಸಿವಿನಿಂದ ಬಳಲಿದ್ದೇನೆ’
–ಹೀಗೆಂದು ಇನ್ಫೊಸಿಸ್‌ನ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು, ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಅಕ್ಷಯ ಪಾತ್ರ ಫೌಂಡೇಶನ್ ನಾಲ್ಕು ಶತಕೋಟಿ ಊಟಗಳನ್ನು ನೀಡಿದೆ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಅಂಗವಾಗಿ ವಿಶ್ವಸಂಸ್ಥೆಯಲ್ಲಿರುವ ಭಾರತ ಕಾಯಂ ಸಮಿತಿಯಿಂದ ‘ಆಹಾರ ಭದ್ರತೆಯಲ್ಲಿನ ಸಾಧನೆಗಳು: ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಭಾರತದ ದಾಪುಗಾಲು’ ವಿಷಯ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾರಾಯಣಮೂರ್ತಿ ಅವರು ಮಾತನಾಡಿದರು.
‘ಬಹಳಷ್ಟು ಜನರಿಗೆ ಹಸಿವಿನ ನರಕದ ದರ್ಶನವಾಗಿಲ್ಲ. ಆದರೆ, ಯುರೋಪ್‌ನಲ್ಲಿ ಹಿಚ್‌ಹೈಕಿಂಗ್ ಮಾಡುವಾಗ ನನಗೆ ಅದರ ಅನುಭವವಾಗಿದೆ’ ಎಂದರು.
‘ಇಲ್ಲಿರುವ ಭಾರತೀಯರು ಹಾಗೂ ನನಗೆ ಭಾರತ ಸರ್ಕಾರದಿಂದ ಉತ್ತಮ ಗುಣಮಟ್ಟದ ಶಿಕ್ಷಣ ಸಿಕ್ಕಿದೆ. ಹಾಗಾಗಿ, ದೇಶಕ್ಕೆ ನಾವು ಕೃತಜ್ಞತೆ ಸಲ್ಲಿಸಬೇಕಿದೆ. ಅನಾಥ, ಬಡಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ನಾವೆಲ್ಲರೂ ಸಹಾಯಹಸ್ತ ಚಾಚಬೇಕಿದೆ’ ಎಂದು ಸಲಹೆ ನೀಡಿದರು.
ಅಶಕ್ತ ಸಮುದಾಯದ ಜನರ ಮೊಗದಲ್ಲಿ ನಗು ಮೂಡಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಕಾರ್ಯ ಶ್ಲಾಘನೀಯವಾದುದು ಎಂದರು.
ಸಮಾಜದ ಮೇಲೆ ಬಡಮಕ್ಕಳು ನಿರೀಕ್ಷೆ ಹಾಗೂ ನಂಬಿಕೆ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅವರು ನಂಬಿಕೆ ಕಳೆದುಕೊಂಡರೆ ಸಮಾಜದಲ್ಲಿ ಸಂಘರ್ಷ ಸೃಷ್ಟಿಸುತ್ತಾರೆ. ಭಾರತ ಸಾಧಿಸಿರುವ ಹಾಗೂ ಭವಿಷ್ಯದಲ್ಲಿ ಸಾಧಿಸಬೇಕಿರುವ ಕಾರ್ಯಗಳನ್ನು ನಾಶಪಡಿಸುತ್ತಾರೆ ಎಂದು ಹೇಳಿದರು.
‘ಅಕ್ಷಯ ಪಾತ್ರ’ ಒಳ್ಳೆಯ ಮಾದರಿಯಾಗಿದೆ. ಬಡಮಕ್ಕಳಲ್ಲಿ ವಿಶ್ವಾಸ, ನಂಬಿಕೆ ಮೂಡಿಸಲು ವಿಶ್ವದ ಇತರೆ ದೇಶಗಳು ಈ ಮಾದರಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.