ನವದೆಹಲಿ:ತಂಬಾಕು ಉತ್ಪನ್ನಗಳ ಮೇಲೆ ಸೆಸ್ ಹೆಚ್ಚಿಸಬೇಕು ಎಂದು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಸ್ವಯಂ ಸೇವಾ ಸಂಸ್ಥೆಗಳು, ವೈದ್ಯರು ಮತ್ತು ಆರ್ಥಿಕತಜ್ಞರು ಜಿಎಸ್‌ಟಿ ಮಂಡಳಿ ರಚಿಸಿರುವ ಸಚಿವರ ತಂಡಕ್ಕೆ ಒತ್ತಾಯಿಸಿದ್ದಾರೆ.
ನೈಸರ್ಗಿಕ ಪ್ರಕೋಪದಿಂದ ನಲುಗಿರುವ ರಾಜ್ಯಗಳಿಗೆ ಹಣಕಾಸಿನ ನೆರವು ಒದಗಿಸಲು ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲು ಸೆಸ್ ವಿಧಿಸುವುದರಿಂದ ಹೆಚ್ಚು ಪ್ರಯೋಜನಗಳು ಇವೆ. ಇಂತಹ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸುವುದರಿಂದ ತಂಬಾಕು ಬಳಕೆಗೆ ಕಡಿವಾಣ ಹಾಕಲು ಮತ್ತು ಸರ್ಕಾರದ ವರಮಾನ ಹೆಚ್ಚಲು ನೆರವಾಗಲಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
‘ಬೀಡಿ, ಸಿಗರೇಟ್‌ಗಳ ಮೇಲೆ ಹೆಚ್ಚುವರಿ ಸೆಸ್ ವಿಧಿಸುವುದರಿಂದ ಸಾರ್ವಜನಿಕರ ಆರೋಗ್ಯವೂ ಗಮನಾರ್ಹವಾಗಿ ಸುಧಾರಣೆಯಾಗಲಿದೆ. ಜತೆಗೆ ಸರ್ಕಾರಗಳಿಗೆ ಹೆಚ್ಚು ವರಮಾನವೂ ದೊರೆಯಲಿದೆ’ ಎಂದು ವೋಲಂಟರಿ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾದ ಸಿಇಒ ಭಾವನಾ ಬಿ. ಮುಖ್ಯೋಪಾಧ್ಯಾಯ ಹೇಳಿದ್ದಾರೆ.
‘ಸೆಸ್ ಹೆಚ್ಚಳದಿಂದ ಬರುವ ವರ ಮಾನದಿಂದ ಕೇರಳಕ್ಕೆ ಅಗತ್ಯವಾಗಿರುವ ಹಣಕಾಸಿನ ನೆರವು ಒದಗಿಸ ಬಹುದು. ಯುವಕರು ತಂಬಾಕು ಬಳಕೆಯಿಂದ ವಿಮುಖರಾಗುವಂತೆಯೂ ಮಾಡಬಹುದು’ ಎಂದು ಹೇಳಿದ್ದಾರೆ.
ತಂಬಾಕು ಉತ್ಪನ್ನಗಳ ಚಿಲ್ಲರೆ ಮಾರಾಟ ದರದ ಕನಿಷ್ಠ ಶೇ 75ರಷ್ಟು ಎಕ್ಸೈಸ್ ಸುಂಕ ವಿಧಿಸುವುದರಿಂದ ತಂಬಾಕು ಬಳಕೆಗೆ ಕಡಿವಾಣ ಹಾಕಲು ಮತ್ತು ಸರ್ಕಾರದ ವರಮಾನ ಹೆಚ್ಚಿಸುವ ಉದ್ದೇಶ ಈಡೇರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಶಿಫಾರಸು ಮಾಡಿದೆ.
ದೇಶದಲ್ಲಿ ತಂಬಾಕು ಉತ್ಪನ್ನಗಳ ಮೇಲಿನ ಒಟ್ಟಾರೆ ತೆರಿಗೆಯು ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ಇದೆ. ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ನಂತರ ಬೀಡಿಗಳ ಮೇಲಿನ ತೆರಿಗೆ ಹೊರೆ ಕೇವಲ ಶೇ 22ರಷ್ಟಿದೆ. ಸಿಗರೇಟ್‌ಗಳ ಮೇಲೆ ಶೇ 53 ಮತ್ತು ಇತರ ಬಗೆಯ ತಂಬಾಕಿನ ಮೇಲೆ ಶೇ 60ರಷ್ಟು ತೆರಿಗೆ ಇದೆ. ಇದು ‘ಡಬ್ಲ್ಯುಎಚ್‌ಒ’ದ ಶಿಫಾರಸಿಗಿಂತ ಕಡಿಮೆ ಇದೆ’ ಎಂದು ಆರೋಗ್ಯ ನೀತಿಗಳ ವಿಶ್ಲೇಷಕರೂ ಆಗಿರುವ ಆರ್ಥಿಕ ತಜ್ಞ ರಿಜೊ ಜಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.