ನವದೆಹಲಿ: ಏಪ್ರಿಲ್‌ನಲ್ಲಿ ದೇಶದ ರಫ್ತು ವಹಿವಾಟು ಶೇ 1ರಷ್ಟು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ₹2.92 ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ಬುಧವಾರ ತಿಳಿಸಿದೆ.
ಜಾಗತಿಕ ಬಿಕ್ಕಟ್ಟಿನ ನಡುವೆಯೂ ಎಲೆಕ್ಟ್ರಾನಿಕ್ಸ್, ರಾಸಾಯನಿಕ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಔಷಧ ವಸ್ತುಗಳ ರಫ್ತಿನಲ್ಲಿ ಏರಿಕೆಯಾಗಿದೆ ಎಂದು ಹೇಳಿದೆ.
ಏಪ್ರಿಲ್‌ನಲ್ಲಿ ಆಮದು ವಹಿವಾಟು ಶೇ 10.25ರಷ್ಟು ಏರಿಕೆಯಾಗಿದ್ದು, ₹4.53 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹4.09 ಲಕ್ಷ ಕೋಟಿ ಆಗಿತ್ತು. ಚಿನ್ನದ ಆಮದಿನಲ್ಲಿ ಹೆಚ್ಚಳವಾಗಿರುವುದೇ ಈ ಏರಿಕೆಗೆ ಕಾರಣವಾಗಿದೆ.
ಈ ತಿಂಗಳಿನಲ್ಲಿ ರಫ್ತು ವಹಿವಾಟಿನ ಮೌಲ್ಯಕ್ಕಿಂತಲೂ ಆಮದು ವಹಿವಾಟು ಮೌಲ್ಯ ಏರಿಕೆ ಆಗಿದೆ. ಇದರಿಂದ ದೇಶದ ವ್ಯಾಪಾರ ಕೊರತೆಯ ಅಂತರವು ₹1.59 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.
2023ರ ಏಪ್ರಿಲ್‌ನಲ್ಲಿ ವ್ಯಾಪಾರ ಕೊರತೆಯು ₹1.20 ಲಕ್ಷ ಕೋಟಿ ಇತ್ತು. ಅದೇ ವರ್ಷದ ಡಿಸೆಂಬರ್‌ನಲ್ಲಿ ₹1.62 ಲಕ್ಷ ಕೋಟಿಗೆ ತಲುಪಿತ್ತು.
ಚಿನ್ನದ ಆಮದು ದ್ವಿಗುಣಗೊಂಡಿದ್ದು, ₹25,965 ಕೋಟಿ ಆಗಿದೆ. ಕಚ್ಚಾ ತೈಲ ಆಮದು ಶೇ 20.22ರಷ್ಟು ಏರಿಕೆಯಾಗಿದ್ದು, ₹1.37 ಲಕ್ಷ ಕೋಟಿಗೆ ಏರಿಕೆಯಾಗಿದೆ.
‘ಪ್ರಸಕ್ತ ಹಣಕಾಸು ವರ್ಷದ ಮೊದಲ ತಿಂಗಳಿನಲ್ಲಿ ರಫ್ತು ವಹಿವಾಟಿನ ಬೆಳವಣಿಗೆಯು ಉತ್ತಮವಾಗಿದೆ. ಮುಂಬರುವ ತಿಂಗಳುಗಳಲ್ಲಿ ಇದೇ ಸ್ಥಿತಿ ಮುಂದುವರಿಯುವ ನಿರೀಕ್ಷೆಯಿದೆ’ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ತಿಳಿಸಿದ್ದಾರೆ.
ಸರಕು ರಫ್ತಿನ 30 ವಲಯಗಳ ಪೈಕಿ ಕಾಫಿ, ತಂಬಾಕು, ಸಂಬಾರ ಪದಾರ್ಥ, ಪ್ಲಾಸ್ಟಿಕ್ ಹಾಗೂ ಕರಕುಶಲ ಸೇರಿ 13 ವಲಯಗಳ ಬೆಳವಣಿಗೆಯು ಸಕಾರಾತ್ಮಕವಾಗಿದೆ ಎಂದು ತಿಳಿಸಿದ್ದಾರೆ.
ಸಚಿವಾಲಯದ ಅಂಕಿ–ಅಂಶದ ಪ್ರಕಾರ ಏಪ್ರಿಲ್‌ನಲ್ಲಿ ಸೇವಾ ವಲಯದ ರಫ್ತು ವಹಿವಾಟಿನ ಮೌಲ್ಯವು ₹2.46 ಲಕ್ಷ ಕೋಟಿ ಆಗಿದೆ. ಸೇವಾ ರಫ್ತು ಆಮದು ಏರಿಕೆಯಾಗಿದ್ದು, ₹1.41 ಲಕ್ಷ ಕೋಟಿಗೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.