ADVERTISEMENT

ರಫ್ತು ವಹಿವಾಟು ಮೌಲ್ಯ ಏರಿಕೆ: ಹಿಗ್ಗಿದ ವಿದೇಶಿ ವ್ಯಾ‍ಪಾರ ಕೊರತೆ

ಪಿಟಿಐ
Published 14 ಜೂನ್ 2024, 16:07 IST
Last Updated 14 ಜೂನ್ 2024, 16:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಮೇ ತಿಂಗಳಿನಲ್ಲಿ ದೇಶದ ರಫ್ತು ವಹಿವಾಟು ಮೌಲ್ಯವು ಶೇ 9.1ರಷ್ಟು ಏರಿಕೆಯಾಗಿದ್ದು, ₹3.18 ಲಕ್ಷ ಕೋಟಿಗೆ ಮುಟ್ಟಿದೆ. ಹಾಗಾಗಿ, ವಿದೇಶಿ ವ್ಯಾಪಾರ ಕೊರತೆಯು ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.  

ಆಮದು ಮತ್ತು ರಫ್ತು ವಹಿವಾಟಿನ ನಡುವಣ ವ್ಯತ್ಯಾಸವನ್ನು ವ್ಯಾಪಾರ ಕೊರತೆ ಎಂದು ಕರೆಯುತ್ತಾರೆ. ಮೇ ತಿಂಗಳಿನಲ್ಲಿ ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಾಗಿದ್ದು, ಕೊರತೆಯ ಅಂತರ ₹1.98 ಲಕ್ಷ ಕೋಟಿ ಆಗಿದೆ.

ADVERTISEMENT

ಆದರೆ, ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆಯೇ ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌, ಔಷಧ, ಜವಳಿ ಹಾಗೂ ಪ್ಲಾಸ್ಟಿಕ್ ವಸ್ತುಗಳ ರಫ್ತು ಪ್ರಮಾಣವು ಸಕಾರಾತ್ಮಕ ಬೆಳವಣಿಗೆ ಕಂಡಿದೆ.

ಆಮದು ಪ್ರಮಾಣದಲ್ಲಿ ಶೇ 7.7ರಷ್ಟು ಏರಿಕೆಯಾಗಿದ್ದು, ₹5.17 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಒಟ್ಟಾರೆ ಆಮದು ಪ್ರಮಾಣದಲ್ಲಿ ಕಚ್ಚಾ ತೈಲದ ಪ್ರಮಾಣ ಹೆಚ್ಚಿದೆ. 

ಮೇ ತಿಂಗಳಿನಲ್ಲಿ ₹1.67 ಲಕ್ಷ ಕೋಟಿ ಮೌಲ್ಯ ತೈಲವು ಭಾರತಕ್ಕೆ ಪೂರೈಕೆಯಾಗಿದೆ. ಏಪ್ರಿಲ್‌ ಮತ್ತು ಮೇ ಅವಧಿಯಲ್ಲಿ ₹3.04 ಲಕ್ಷ ಕೋಟಿ ಮೌಲ್ಯದ ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ. 

ಆದರೆ, ಚಿನ್ನದ ಆಮದು ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ₹30,826 ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು. ಪ್ರಸಕ್ತ ವರ್ಷದ ಮೇ ತಿಂಗಳಿನಲ್ಲಿ ₹27,818 ಕೋಟಿಗೆ ಇಳಿದಿದೆ.

‘ಮೇ ತಿಂಗಳಿನಲ್ಲಿ ರಫ್ತು ಪ್ರಮಾಣವು ಉತ್ತಮವಾಗಿದೆ. ಇದೇ ಪರಿಸ್ಥಿತಿ ಮುಂದುವರಿಯುವ ನಿರೀಕ್ಷೆಯಿದೆ’ ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಚಿಲ್ಲರೆ ಹಣದುಬ್ಬರ ಏರಿಕೆ ಮುಂದುವರಿದಿದ್ದು, ಆರ್ಥಿಕತೆಯು ಮಂದಗತಿಯಲ್ಲಿದೆ. ಇದು ಖರೀದಿಯು ಶಕ್ತಿ ಹೆಚ್ಚಿಸಲಿದ್ದು, ರಫ್ತು ಪ್ರಮಾಣದ ಬೇಡಿಕೆ ಹೆಚ್ಚಳಕ್ಕೆ ಸೇತುವೆಯಾಗಲಿದೆ’ ಎಂದರು.

ವ್ಯಾಪಾರ ಕೊರತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಗತ್ತಿನ ಇತರೇ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆಯು ಸದೃಢವಾಗಿದೆ. ದೇಶೀಯ ಮಟ್ಟದ ಬೇಡಿಕೆಗೆ ಅನುಗುಣವಾಗಿ ಆಮದು ಪ್ರಮಾಣದಲ್ಲಿ ಏರಿಕೆಯಾಗಿದೆ. ಹಾಗಾಗಿ, ರಫ್ತು ಪ್ರಮಾಣದಲ್ಲಿ ಇಳಿಕೆಯಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.