ನವದೆಹಲಿ: ದೇಶದ ವ್ಯಾಪಾರ ಕೊರತೆ ಅಂತರವು 2021ರ ಮೇ ತಿಂಗಳಿನಲ್ಲಿ ₹ 50,678 ಕೋಟಿ ಇದ್ದಿದ್ದು, 2022ರ ಮೇನಲ್ಲಿ ₹ 1.81 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಆಮದು ವಹಿವಾಟಿನ ಮೌಲ್ಯವು ರಫ್ತು ವಹಿವಾಟಿನ ಮೌಲ್ಯಕ್ಕಿಂತಲೂ ಹೆಚ್ಚಾಗಿದೆ. ಹೀಗಾಗಿ ಮೇ ನಲ್ಲಿ ವ್ಯಾಪಾರ ಕೊರತೆ ಅಂತರದಲ್ಲಿ ಏರಿಕೆ ಆಗಿದೆ.
ಏಪ್ರಿಲ್–ಮೇ ಅವಧಿಯಲ್ಲಿ ವ್ಯಾಪಾರ ಕೊರತೆ ಅಂತರವು ₹ 1.69 ಲಕ್ಷ ಕೋಟಿಯಿಂದ ₹ 3.39 ಲಕ್ಷ ಕೋಟಿಗೆ ಏರಿಕೆ ಆಗಿದೆ.
ರಫ್ತು ವಹಿವಾಟು ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮೇನಲ್ಲಿ ಶೇ 15.46ರಷ್ಟು ಹೆಚ್ಚಾಗಿದ್ದು, ₹ 2.89 ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.
ಪೆಟ್ರೋಲಿಯಂ ಉತ್ಪನ್ನಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ರಾಸಾಯನಿಕ ವಲಯಗಳ ಉತ್ತಮ ಬೆಳವಣಿಗೆಯಿಂದ ಈ ಪ್ರಗತಿ ಸಾಧ್ಯವಾಗಿದೆ.
ಎಂಜಿನಿಯರಿಂಗ್ ಸರಕುಗಳ ರಫ್ತು ಶೇ 7.84ರಷ್ಟು, ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಶೇ 53ರಷ್ಟು ಹೆಚ್ಚಾಗಿದೆ. ಹರಳು, ಚಿನ್ನಾಭರಣ ಹಾಗೂ ರಾಸಾಯನಿಕ, ಔಷಧ ಉತ್ಪನ್ನಗಳು, ಸಿದ್ಧ ಉಡುಪು ರಫ್ತು ಸಹ ಹೆಚ್ಚಾಗಿದೆ.
ಆಮದು ವಹಿವಾಟು ₹ 41,360 ಕೋಟಿಯಿಂದ ₹ 4.70 ಲಕ್ಷ ಕೋಟಿಗೆ ಶೇ 56.14ರಷ್ಟು ಏರಿಕೆ ಕಂಡಿದೆ.
ಪೆಟ್ರೋಲಿಯಂ ಮತ್ತು ಕಚ್ಚಾ ತೈಲ ಆಮದು ಶೇ 91.6ರಷ್ಟು ಭಾರಿ ಏರಿಕೆ ಕಂಡಿದ್ದು, ₹ 1.40 ಲಕ್ಷ ಕೋಟಿಗೆ ಏರಿಕೆ ಆಗಿದೆ. ಚಿನ್ನದ ಆಮದು ₹ 5,253 ಕೋಟಿಯಿಂದ ₹ 45,136 ಕೋಟಿಗೆ ಏರಿಕೆ ಆಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.