ADVERTISEMENT

ಮೂಲ ಸೌಕರ್ಯ ವಲಯದಲ್ಲಿ ಹೂಡಿಕೆ ವರದಾನ: LICಗೆ ಶೇ 79ರಷ್ಟು ಗಳಿಕೆ

ಪಿಟಿಐ
Published 17 ಜುಲೈ 2024, 15:25 IST
Last Updated 17 ಜುಲೈ 2024, 15:25 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ದೇಶದ ಮೂಲ ಸೌಕರ್ಯ ವಲಯದ ಷೇರುಗಳಲ್ಲಿನ ಹೂಡಿಕೆಯು ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಪಾಲಿಗೆ ವರದಾನವಾಗಿದೆ. ಒಂದು ವರ್ಷದಲ್ಲಿ ನಿಗಮದ ಷೇರಿನ ಮೌಲ್ಯದಲ್ಲಿ ಶೇ 79ರಷ್ಟು ಏರಿಕೆಯಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಎಚ್‌ಡಿಎಫ್‌ಸಿ ಲೈಫ್‌ ಮತ್ತು ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್‌ ಕಂಪನಿಯು ಮಾಹಿತಿ ತಂತ್ರಜ್ಞಾನ, ಗ್ರಾಹಕ, ಬ್ಯಾಂಕಿಂಗ್‌, ಹಣಕಾಸು ಸೇವೆಗಳು ಮತ್ತು ವಿಮೆ (ಬಿಎಫ್‌ಎಸ್‌ಐ) ವಲಯಗಳಲ್ಲಿ ಹೆಚ್ಚು ಹೂಡಿಕೆ ಮಾಡಿವೆ. ಆದರೆ, ಎಲ್‌ಐಸಿ ದೇಶದ ಅಭಿವೃದ್ಧಿಗೆ ಪೂರಕವಾದ ಮೂಲ ಸೌಕರ್ಯ ವಲಯದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸಿದೆ ಎಂದು ಹೇಳಿದ್ದಾರೆ. 

ಕಳೆದ ವರ್ಷದ ಜೂನ್‌ 18ರಂದು ಎಲ್‌ಐಸಿಯ ಪ್ರತಿ ಷೇರಿನ ಬೆಲೆಯು ₹620 ಇತ್ತು. ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ₹1,109ಕ್ಕೆ ತಲುಪಿದೆ ಎಂದು ಷೇರುಪೇಟೆಯ ಅಂಕಿಅಂಶ ತಿಳಿಸಿವೆ.

ADVERTISEMENT

ಎಫ್‌ಡಿಎಫ್‌ಸಿ ಲೈಫ್‌ ಕಂಪನಿಯ ಷೇರಿನ ಮೌಲ್ಯ ಇಳಿಕೆಯಾಗಿದೆ. ವರ್ಷದ ಹಿಂದೆ ಪ್ರತಿ ಷೇರಿಗೆ ₹666 ಇತ್ತು. ಈಗ ₹646ಕ್ಕೆ ಕುಸಿದಿದೆ. ಐಸಿಐಸಿಐ ಪ್ರುಡೆನ್ಶಿಯಲ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿಯ ಷೇರಿನ ಮೌಲ್ಯವು ಶೇ 12ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಪ್ರತಿ ಷೇರಿನ ಬೆಲೆ ₹582 ಇತ್ತು. ಸದ್ಯ ₹654ಕ್ಕೆ ತಲುಪಿದೆ. 

ಎಸ್‌ಐಬಿ ಲೈಫ್‌ ಇನ್ಶೂರೆನ್ಸ್‌ ಷೇರಿನ ಮೌಲ್ಯವು ಒಂದು ವರ್ಷದಲ್ಲಿ ಶೇ 23ರಷ್ಟು ಏರಿಕೆಯಾಗಿದೆ. ₹1,314 ಇದ್ದ ಪ್ರತಿ ಷೇರಿನ ಬೆಲೆಯು, ಈಗ ₹1,621ಕ್ಕೆ ತಲುಪಿದೆ. 

ಭಾರತದ ಬಹುತೇಕ ವಿಮಾ ಕಂಪನಿಗಳು ಬಿಎಫ್‌ಎಸ್‌ಐ, ಐ.ಟಿ ಮತ್ತು ಗ್ರಾಹಕರ ವಲಯದಲ್ಲಿ ಹೂಡಿಕೆ ಮಾಡುತ್ತವೆ. ಮೂಲ ಸೌಕರ್ಯ ವಲಯದಲ್ಲಿ ಶೇ 8ರಿಂದ 10ರಷ್ಟು ಹೂಡಿಕೆ ಮಾಡುತ್ತವೆ. ಜಾಗತಿಕ ಮಟ್ಟದ ಕಂಪನಿಗಳಿಗೆ ಹೋಲಿಸಿದರೆ ಈ ಮೊತ್ತ ತೀರಾ ಕಡಿಮೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.  

ಜಾಗತಿಕ ಮಟ್ಟದ ಅಲಿಯಾನ್ಸ್, ನಿಪ್ಪನ್‌ ಲೈಫ್‌ ಇನ್ಶೂರೆನ್ಸ್‌, ಮೆಟ್‌ಲೈಫ್‌, ಬರ್ಕ್‌ಷೈರ್ ಹ್ಯಾಥ್‌ವೇ ಸೇರಿ ಹಲವು ವಿಮಾ ಕಂಪನಿಗಳು ಮೂಲ ಸೌಕರ್ಯ ವಲಯದ ಷೇರುಗಳಲ್ಲಿ ಶೇ 15ರಿಂದ 30ರಷ್ಟು ಹೂಡಿಕೆ ಮಾಡುತ್ತವೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ದೇಶದ ಮೂಲ ಸೌಕರ್ಯ ವಲಯದ ಅಭಿವೃದ್ಧಿಗೆ ಹೆಚ್ಚು ಬಂಡವಾಳವನ್ನು ವಿನಿಯೋಗಿಸುತ್ತಿದೆ. ಇದರ ಬೆಳವಣಿಗೆಗೆ ಪೂರಕವಾದ ನೀತಿಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದು ಇತರೆ ವಲಯಗಳ ಅಭಿವೃದ್ಧಿಗೂ ಸಹಕಾರಿಯಾಗಿದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.