ನ್ಯೂಯಾರ್ಕ್: ಉಕ್ರೇನ್ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆಯನ್ನು ಖಂಡಿಸಿ ಅಮೆರಿಕ ಹಾಗೂ ನ್ಯಾಟೊ ಮಿತ್ರ ರಾಷ್ಟ್ರಗಳು ಹಲವು ನಿರ್ಬಂಧಗಳನ್ನು ಹೇರಿವೆ.
ಇದಕ್ಕೆ ಅಮೆರಿಕದ ಕಾರ್ಪೋರೇಟ್ ದೈತ್ಯ ಕಂಪನಿಗಳು ಕೈಜೋಡಿಸಿಕೊಂಡಿವೆ. ರಷ್ಯಾದೊಂದಿಗಿನ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸುವುದಾಗಿ ಟೆಕ್ ದೈತ್ಯ ಆ್ಯಪಲ್, ಎಕ್ಸಾನ್ ಮೊಬೈಲ್ ಹಾಗೂ ಬೋಯಿಂಗ್ ಸಂಸ್ಥೆಗಳು ಘೋಷಿಸಿವೆ.
ರಷ್ಯಾ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಿ ಎಲ್ಲ ವಿಭಾಗದಿಂದಲೂ ಪ್ರತ್ಯೇಕಿಸುವ ಗುರಿ ಹೊಂದಲಾಗಿದೆ.ಡಿಸ್ನಿ, ಫೋರ್ಡ್, ಜನರಲ್ ಮೋಟರ್ಸ್, ಮಾಸ್ಟರ್‌ಕಾರ್ಡ್, ಅಮೆರಿಕನ್ ಎಕ್ಸ್‌ಪ್ರೆಸ್ ಸಂಸ್ಥೆಗಳುಈಗಾಗಲೇ ನಿರ್ಬಂಧವನ್ನು ಹೇರಿವೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಿರುವ ಅಮೆರಿಕದ ಬಹುರಾಷ್ಟ್ರೀಯ ತೈಲ ಹಾಗೂ ಅನಿಲ ಕಂಪನಿಯಾಗಿರುವ ಎಕ್ಸಾನ್ ಮೊಬೈಲ್ ಕಾರ್ಪೋರೇಷನ್, ಹಂತ ಹಂತವಾಗಿ ರಷ್ಯಾದಿಂದ ಹಿಂದಕ್ಕೆ ಸರಿಯುವುದಾಗಿ ಘೋಷಿಸಿದೆ. ಎಕ್ಸಾನ್ ಮೊಬೈಲ್ 1995ರಿಂದಲೇ ರಷ್ಯಾದಲ್ಲಿ ಕಾರ್ಯಾಚರಿಸುತ್ತಿತ್ತು.
ಇದಕ್ಕೂ ಮೊದಲು ಬ್ರಿಟನ್‌ನ ಶೆಲ್ ಹಾಗೂ ಬಿಪಿ ಕಂಪನಿಗಳು ರಷ್ಯಾದೊಂದಿಗಿನ ಜಂಟಿ ಯೋಜನೆಗಳಿಂದ ಹಿಂದೆ ಸರಿದಿತ್ತು.
ರಷ್ಯಾದಲ್ಲಿ ತನ್ನೆಲ್ಲ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸುವುದಾಗಿ ಆ್ಯಪಲ್ ಘೋಷಿಸಿದೆ. ಹಾಗೆಯೇ ಆ್ಯಪಲ್ ಪೇ ಹಾಗೂ ಇತರೆ ಸೇವೆಗಳ ಬಳಕೆ ಮಿತಿಗೊಳಿಸುವುದಾಗಿ ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ಕಾರ್ಯಾಚರಣೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸಂಸ್ಥೆಯು ಯುದ್ಧದಿಂದ ತೊಂದರೆ ಅನುಭವಿಸುತ್ತಿರುವ ಜನರೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದೆ.
ಬೋಯಿಂಗ್ ಕೂಡ ರಷ್ಯಾದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಅಲ್ಲದೆ ರಷ್ಯಾದ ಏರ್‌ಲೈನ್ಸ್‌ಗೆ ನೀಡುವ ಬೆಂಬಲವನ್ನು ನಿಲ್ಲಿಸುವುದಾಗಿ ತಿಳಿಸಿದೆ.
ಇದು ಬೋಯಿಂಗ್ 737 ಹಾಗೂ 777 ವಿಮಾನಗಳ ಹಾರಾಟ ನಡೆಸುವ ರಷ್ಯಾದ ವಿಮಾನಯಾನ ಸಂಸ್ಥೆ ಏರೋಫ್ಲಾಟ್ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ.
ಅಂತರರಾಷ್ಟ್ರೀಯ ಪಾವತಿ ವ್ಯವಸ್ಥೆ 'ಸ್ವಿಫ್ಟ್'ನಿಂದಲೂ ರಷ್ಯಾವನ್ನು ಹೊರಗಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.