ADVERTISEMENT

ವಂಚಕ ಮೆಸೇಜ್ ಬಲೆಗೆ ಬೀಳದಿರಿ

ವಿಶ್ವನಾಥ ಎಸ್.
Published 29 ಅಕ್ಟೋಬರ್ 2019, 19:30 IST
Last Updated 29 ಅಕ್ಟೋಬರ್ 2019, 19:30 IST
ಅಂತರ್ಜಾಲ
ಅಂತರ್ಜಾಲ   

ಇತ್ತೀಚೆಗೆ ಸ್ನೇಹಿತರ ಮೊಬೈಲ್‌ಗೆ ಇಂಗ್ಲಿಷ್‌ನಲ್ಲಿ ಒಂದು ಸಂದೇಶ (ಟೆಕ್ಸ್ಟ್‌ ಮೆಸೇಜ್‌) ಬಂದಿತ್ತು. 2019ರ ವಾಟ್ಸ್‌ಆ್ಯಪ್‌ ಗ್ಲೋಬಲ್ ಅವಾರ್ಡ್‌ನಲ್ಲಿ ನಿಮ್ಮ ವಾಟ್ಸ್‌ಆ್ಯಪ್‌ ನಂಬರ್‌ ₹ 2 ಕೋಟಿ 75 ಲಕ್ಷ ಗೆದ್ದುಕೊಂಡಿದೆ. ಈ ಬಹುಮಾನ ಪಡೆದುಕೊಳ್ಳಲು ನಿಮ್ಮ ಹೆಸರು, ಮೊಬೈಲ್‌ ನಂಬರ್‌, ವಯಸ್ಸು ಮತ್ತು ಉದ್ಯೋಗದ ಮಾಹಿತಿಯನ್ನು rbidelhi@rbidelhigovt.comಗೆ ಕಳುಹಿಸಿ ಎಂದು ಅದರಲ್ಲಿ ಇತ್ತು. ಜನರನ್ನು ವಂಚಿಸಲು ಇರುವ ಮಾರ್ಗಗಳಲ್ಲಿ ಇದೂ ಒಂದು.

ಕುತೂಹಲಕ್ಕಾಗಿಯಾದರೂ ನೀವು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ ಅದು ನಿಮ್ಮನ್ನು ತನ್ನ ಮೋಸದ ಜಾಲದಲ್ಲಿ ಸಿಲುಕಿಸಿ ನಿಮ್ಮಿಂದ ಹಣ ಕೀಳುವ ಇಲ್ಲವೇ ನಿಮ್ಮ ವೈಯಕ್ತಿಕ ಮಾಹಿತಿ ಪಡೆದು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಇಂತಹ ಸಂದೇಶಗಳನ್ನು ನಿರ್ಲಕ್ಷಿಸುವುದೇ ಒಳಿತು.

ಇಲ್ಲಿ ಅಚ್ಚರಿಯ ವಿಷಯ ಏನೆಂದರೆ, ಸಾಮಾನ್ಯವಾಗಿ ಈ ರೀತಿ ಸೃಷ್ಟಿಯಾಗುವ ನಕಲಿ ಇ–ಮೇಲ್‌ ವಿಳಾಸ ವಿಚಿತ್ರವಾಗಿರುತ್ತವೆ. ಸುಲಭಕ್ಕೆ ಓದಲೂ ಆಗದಂತಿರುತ್ತವೆ. ಇಲ್ಲಿ ಬಂದಿರುವ ವಿಳಾಸದಲ್ಲಿ ಆರ್‌ಬಿಐ ದೆಹಲಿ ಎಂದಿದೆ. ಅಂದರೆ, ಆರ್‌ಬಿಐ ಎಂದಾಕ್ಷಣ ಜನ ನಂಬುತ್ತಾರೆ ಎಂದುಕೊಂಡಂತಿದೆ. ಇಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿ ಏನೆಂದರೆ, ವಾಟ್ಸ್‌ಆ್ಯಪ್‌ಗೂ ಆರ್‌ಬಿಐಗೂ ಯಾವುದೇ ಸಂಬಂಧ ಇಲ್ಲ. ಹೀಗಿರುವಾಗ ವಾಟ್ಸ್‌ಆ್ಯಪ್‌ ಅವಾರ್ಡ್‌ ಅನ್ನು ಆರ್‌ಬಿಐ ಕೊಡುತ್ತದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ.

ADVERTISEMENT

ಅಷ್ಟಕ್ಕೂ ಗ್ಲೋಬಲ್‌ ಅವಾರ್ಡ್‌ ಏರ್ಪಡಿಸುವುದೇ ಆದರೆ ವಾಟ್ಸ್‌ಆ್ಯಪ್‌ ಅದನ್ನು ಬಹಳ ದೊಡ್ಡ ಮಟ್ಟದಲ್ಲಿ ಜಾಹೀರಾತು, ಪ್ರಕಟಣೆಯ ಮೂಲಕ ಘೋಷಣೆ ಮಾಡಬೇಕಿತ್ತು ಅಲ್ಲವೆ. ಅಂತಹ ಯಾವುದೇ ಸುದ್ದಿ, ಜಾಹೀರಾತು ಎಲ್ಲಿಯೂ ಪ್ರಕಟವಾಗಿಲ್ಲ. ಜನರನ್ನು ಮೂರ್ಖರನ್ನಾಗಿಸಿ, ಅವರಿಂದ ಹಣ ಮತ್ತು ಇತರ ಮಾಹಿತಿ ದೋಚುವ ದುರುದ್ದೇಶದಿಂದಲೇ ಈ ರೀತಿ ವಂಚನೆಯ ಮೆಸೆಜ್‌ ಹರಿಬಿಡಲಾಗುತ್ತದೆ. ಹೀಗಾಗಿ, ಇಂತಹ ಸಂದರ್ಭಗಳಲ್ಲಿ ಕುತೂಹಲ, ಅತಿ ಬುದ್ಧಿವಂತಿಕೆ ಉಪಯೋಗಿಸದೇ ನಿರ್ಲಕ್ಷ್ಯ ತೋರುವುದೇ ಜಾಣತನ.

ಕೆಲವು ಮುನ್ನೆಚ್ಚರಿಕಾ ಕ್ರಮಗಳು

* ಮೆಸೇಜ್‌ನಲ್ಲಿರುವ ಯಾವುದೇ ಲಿಂಕ್‌ ಮೇಲೆಯೂ ಕ್ಲಿಕ್‌ ಮಾಡಬೇಡಿ. ಒಂದೊಮ್ಮೆ ಕ್ಲಿಕ್ ಮಾಡಿದರೂ ಯಾವುದೇ ರೀತಿಯ ವೈಯಕ್ತಿಕ ಮಾಹಿತಿ ನೀಡಬೇಡಿ.

*ಅನುಮಾನ ಬಂದರೆ ಅಧಿಕೃತ ಜಾಲತಾಣಕ್ಕೆ ಹೋಗಿ ಲಾಗಿನ್‌ ಆಗಿ. ನಿಜವಾಗಿಯೂ ಸಮಸ್ಯೆ ಇದ್ದರೆ ಆಗ ನೀವು ಏನು ಮಾಡಬೇಕು ಎನ್ನುವ ಬಗ್ಗೆ ಅಲ್ಲಿ ಮಾಹಿತಿ ಪಡೆದುಕೊಳ್ಳಬಹುದು.

*ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಹಿಂಭಾಗದಲ್ಲಿ ನೀಡಿರುವ ಸಹಾಯವಾಣಿ ಅಥವಾ ಮೊಬೈಲ್‌ ನಂಬರ್‌ ಜತೆಯೂ ಸಂದೇಶ ಬಂದಿರುವ ಮೊಬೈಲ್‌ ಸಂಖ್ಯೆಯನ್ನು ತಾಳೆ ಮಾಡಿ ನೋಡಿ.

*ಯಾವುದೇ ಬ್ಯಾಂಕ್‌/ಹಣಕಾಸು ಸಂಸ್ಥೆಯೂ ಫೋನ್‌ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಕಳುಹಿಸುವಂತೆ ಕೇಳುವುದಿಲ್ಲ.

*ಆನ್‌ಲೈನ್‌ ಷಾಪಿಂಗ್‌ನಲ್ಲಿ ಕಾರ್ಡ್‌ ನಂಬರ್‌, ಎಕ್ಸ್‌ಪೈರಿ ಡೇಟ್‌ ನೀಡಿ ಹಣ ಪಾವತಿಸುವ ಮುನ್ನ Remember this for future ಎನ್ನುವಲ್ಲಿ ಟಿಕ್‌ ಮಾರ್ಕ್‌ ಇದ್ದರೆ ಅದನ್ನು ಅನ್‌ ಟಿಕ್‌ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.