ನವದೆಹಲಿ: ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯಿಂದ (ಸಿಬಿಐಸಿ) ದೇಶದಾದ್ಯಂತ ಜಿಎಸ್‌ಟಿ ನಕಲಿ ನೋಂದಣಿ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 10,700 ನಕಲಿ ಕಂಪನಿಗಳನ್ನು ಪತ್ತೆ ಹಚ್ಚಲಾಗಿದೆ. ಒಟ್ಟು ₹10,179 ಕೋಟಿ ವಂಚನೆ ಬೆಳಕಿಗೆ ಬಂದಿದೆ.
ನಕಲಿ ನೋಂದಣಿ ವಿರುದ್ಧ ಹಮ್ಮಿಕೊಂಡಿರುವ ಈ ಎರಡನೇ ಹಂತದ ವಿಶೇಷ ಕಾರ್ಯಾಚರಣೆಯು ಅಕ್ಟೋಬರ್ 15ರ ವರೆಗೆ ನಡೆಯಲಿದೆ.
ಮಂಗಳವಾರ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಬಿಐಸಿ ಸದಸ್ಯ ಶಶಾಂಕ್ ಪ್ರಿಯಾ, ಈಗಾಗಲೇ ದೇಶದ 12 ರಾಜ್ಯಗಳಲ್ಲಿ ಆಧಾರ್ ಸಂಖ್ಯೆ ಆಧಾರಿತ ಜಿಎಸ್‌ಟಿ ನೋಂದಣಿ ದೃಢೀಕರಣ ಪ್ರಕ್ರಿಯೆ ಜಾರಿಯಲ್ಲಿದೆ. ಅಕ್ಟೋಬರ್ 4ರಿಂದ ನಾಲ್ಕು ರಾಜ್ಯಗಳಲ್ಲಿ ಆರಂಭವಾಗಲಿದೆ ಎಂದರು.
‘ಅಂತಿಮವಾಗಿ ದೇಶದ 20 ರಾಜ್ಯಗಳಲ್ಲಿ ಈ ಪ್ರಕ್ರಿಯೆ ಜಾರಿಗೆ ಬರಲಿದೆ’ ಎಂದು ಹೇಳಿದರು.
‘ತೆರಿಗೆ ವಂಚನೆ ಎಸಗುವ ವರ್ತಕರಿಗೆ ಇಲಾಖೆಯು ಭವಿಷ್ಯದಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ’ ಎಂದು ಹೇಳಿದರು.
‘ಇಂತಹ ತೆರಿಗೆದಾರರು ಎಷ್ಟು ಇನ್‌ವಾಯ್ಸ್ ವಿತರಿಸಬಹುದು ಎಂಬ ಬಗ್ಗೆ ಕೆಲವು ನಿರ್ಬಂಧ ಹೇರುತ್ತೇವೆ’ ಎಂದ ಅವರು, ‘ತೆರಿಗೆ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಇದಕ್ಕೆ ಕಡಿವಾಣ ಹಾಕಲು ಮಂಡಳಿಯು ಎಲ್ಲಾ ವಿಧಾನಗಳನ್ನು ಅನುಸರಿಸಲಿದೆ’ ಎಂದು ಹೇಳಿದರು.
ಸರಕು ಮತ್ತು ಸೇವಾ ತೆರಿಗೆ ಅಡಿ ವರ್ತಕರಿಗೆ ಗುರುತಿನ ಸಂಖ್ಯೆ (ಜಿಎಸ್‌ಟಿಐಎನ್) ನೀಡಲಾಗುತ್ತದೆ. ಒಟ್ಟು 67,970 ಜಿಎಸ್‌ಟಿಐಎನ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ ಇಲ್ಲಿಯವರೆಗೆ 39,965 ಜಿಎಸ್‌ಟಿಐಎನ್‌ಗಳ ಪರಿಶೀಲನೆ ಪೂರ್ಣಗೊಂಡಿದೆ ಎಂದು ಹೇಳಿದರು.
ನಕಲಿ ಇನ್‌ವಾಯ್ಸ್ ಸಲ್ಲಿಸಿ ಪಡೆದಿದ್ದ ₹2,994 ಮೊತ್ತದಷ್ಟು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ ಇಲ್ಲಿಯವರೆಗೆ ₹28 ಕೋಟಿಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ದೇಶದಲ್ಲಿ ಮೊದಲ ಹಂತದಲ್ಲಿ 2023ರ ಮೇ 16ರಿಂದ ಜುಲೈ 15ರ ವರೆಗೆ ನಕಲಿ ನೋಂದಣಿ ವಿರುದ್ಧ ಕಾರ್ಯಾಚರಣೆ ನಡೆದಿತ್ತು. 21,791 ನಕಲಿ ಕಂಪನಿಗಳನ್ನು ಪತ್ತೆ ಹಚ್ಚಿದ್ದ ತೆರಿಗೆ ಅಧಿಕಾರಿಗಳು, ₹24,010 ಕೋಟಿ ವಂಚನೆಯನ್ನು ಬಯಲಿಗೆ ಎಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.