ಬೆಂಗಳೂರು: ಟಿಆರ್‌ಪಿ ಹಗರಣ ದೇಶದಾದ್ಯಂತ ಸದ್ದು ಮಾಡಿರುವ ಬೆನ್ನಲ್ಲೇ ಪಾರ್ಲೆ ಮತ್ತು ಬಜಾಜ್ ಕಂಪನಿಗಳು ಆಕ್ರಮಣಶೀಲ ವಿಷಯಗಳನ್ನು ಪ್ರಚುರಪಡಿಸುವ ಟಿವಿ ಚಾನೆಲ್‌ಗಳಲ್ಲಿ ಜಾಹೀರಾತು ನೀಡದಿರಲು ನಿರ್ಧರಿಸಿವೆ. 'ಸಮಾಜಕ್ಕೆ ವಿಷಕಾರುವ ಮೂಲಗಳೊಂದಿಗೆ ನಾವು ಕೈಜೋಡಿಸುವುದಿಲ್ಲ' ಎಂದು ಹೇಳಿವೆ.
ಟಿಆರ್‌ಪಿ ತಿರುಚಿರುವ ಪ್ರಕರಣದ ಸಂಬಂಧ ಮುಂಬೈ ಪೊಲೀಸರು ಈಗಾಗಲೇ ಮರಾಠಿಯ ಎರಡು ಚಾನೆಲ್‌ಗಳ ಮಾಲೀಕರನ್ನು ಬಂಧಿಸಿದ್ದಾರೆ ಹಾಗೂ ರಿಪಬ್ಲಿಕ್ ಟಿವಿಯ ಸಿಇಒ ಸೇರಿದಂತೆ ಆರು ಜನರ ವಿಚಾರಣೆ ನಡೆಸುತ್ತಿದೆ. ಟಿಆರ್‌ಪಿ ಅಳೆಯಲು ಮಾಪನ ಸಾಧನಗಳನ್ನು ಅಳವಡಿಸಲಾಗಿರುವ ಮನೆಗಳಲ್ಲಿ ನಿರ್ದಿಷ್ಟ ಚಾನೆಲ್ ವೀಕ್ಷಣೆಗಾಗಿ ಹಣ ನೀಡಲಾಗಿರುವುದು ತನಿಖೆಯಿಂದ ಹೊರಬಂದಿದೆ. ಇದರಿಂದಾಗಿ ಬಾರ್ಕ್ ನೀಡಿರುವ ಟಿಆರ್‌ಪಿ, ಅದನ್ನು ಆಧರಿಸಿ ಟಿವಿ ಚಾನೆಲ್‌ಗಳಲ್ಲಿ ಜಾಹೀರಾತು ನೀಡಿರುವ ಕಂಪನಿಗಳು ಯೋಚಿಸುವಂತಾಗಿದೆ.
'ಸಮಾಜಕ್ಕೆ ಅಪಾಯಕಾರಿಯಾಗುವ ವಿಷಯಗಳನ್ನು ಪ್ರಸಾರ ಮಾಡುವ ನ್ಯೂಸ್ ಚಾನೆಲ್‌ಗಳಲ್ಲಿ ಕಂಪನಿಯು ಜಾಹೀರಾತು ನೀಡುವುದಿಲ್ಲ' ಎಂದು ಪಾರ್ಲೆಜಿ ಬಿಸ್ಕತ್ ತಯಾರಿಸುವ ಪಾರ್ಲೆ ಪ್ರಾಡಕ್ಟ್ಸ್‌ನ ಮಾರ್ಕೆಟಿಂಗ್ ಮುಖ್ಯಸ್ಥ ಕೃಷ್ಣರಾವ್ ಬುದ್ಧ ಹೇಳಿದ್ದಾರೆ. ಈ ಕುರಿತು ಲೈವ್‌ಮಿಂಟ್ ವೆಬ್‌ಸೈಟ್ ವರದಿ ಮಾಡಿದೆ.
'ನ್ಯೂಸ್ ಚಾನೆಲ್‌ಗಳಿಗೆ ನೀಡುವ ಜಾಹೀರಾತುಗಳನ್ನು ನಿಯಂತ್ರಿಸುವ ಸಾಧ್ಯತೆಗಳ ಬಗ್ಗೆ ಗಮನ ನೀಡಿದ್ದೇವೆ, ಇತರೆ ಜಾಹೀರಾತುದಾರರೂ ಸಹ ಜೊತೆಯಾಗಿ ಈ ನಿರ್ಧಾರ ಕೈಗೊಂಡರೆ ಎಲ್ಲ ನ್ಯೂಸ್ ಚಾನೆಲ್‌ಗಳಿಗೂ ಸ್ಪಷ್ಟ ಸೂಚನೆ ರವಾನೆಯಾಗುತ್ತದೆ ಹಾಗೂ ಅವರು ನೀಡುವ ವಿಷಯಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ' ಎಂದು ಕೃಷ್ಣರಾವ್ ಬುದ್ಧ ಹೇಳಿದ್ದಾರೆ. ಆಕ್ರಮಣಶೀಲತೆ ಮತ್ತು ಅಪಾಯಕಾರಿ ವಿಚಾರಗಳನ್ನು ಬಿಂಬಿಸುವ ಚಾನೆಲ್‌ಗಳಿಗೆ ಹಣ ನೀಡುವಂತಹ ಕಂಪನಿ ನಮ್ಮದಲ್ಲ ಎಂದಿದ್ದಾರೆ.
ಕೈಗಾರಿಕೋದ್ಯಮಿ ಮತ್ತು ಬಜಾಜ್ ಆಟೊ ಎಂಡಿ ರಾಜೀವ್ ಬಜಾಜ್ ಸಿಎನ್‌ಬಿಸಿ ಟಿವಿ18 ಜೊತೆಗೆ ಗುರುವಾರ ಮಾತನಾಡಿದ್ದು, ಕಂಪನಿಯು ಮೂರು ಚಾನೆಲ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ ಎಂದಿದ್ದಾರೆ. 'ಸಮರ್ಥವಾದ ಬ್ರ್ಯಾಂಡ್ ಉದ್ಯಮವನ್ನು ಉತ್ತಮಗೊಳಿಸಲು ಅಗತ್ಯ ಅಡಿಪಾಯವಾಗಿರುತ್ತದೆ. ಅಂತಿಮವಾಗಿ ಸಮರ್ಥವಾದ ಉದ್ಯಮದ ಆಶಯವೂ ಸಮಾಜಕ್ಕೆ ಕೊಡುಗೆ ನೀಡುವುದೇ ಆಗಿರುತ್ತದೆ. ಸಮಾಜಕ್ಕೆ ವಿಷದ ಮೂಲವಾಗಿ ತೋರುವ ಯಾವುದರ ಜೊತೆಗೂ ನಮ್ಮ ಬ್ರ್ಯಾಂಡ್ ಯಾವತ್ತಿಗೂ ಕೈಜೋಡಿಸುವುದಿಲ್ಲ' ಎಂದು ಬಜಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಮವಾರ ಟ್ವಿಟರ್‌ನಲ್ಲಿ ಪಾರ್ಲೆಜಿ ಟ್ರೆಂಡ್ ಆಗಿದ್ದು, ಪಾರ್ಲೆ ಮತ್ತು ಬಜಾಜ್ ಕಂಪನಿಗಳ ನಿರ್ಧಾರಕ್ಕೆ ಟ್ವೀಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕೋವಿಡ್ ಕಾರಣಗಳಿಂದ ಬಹಳಷ್ಟು ಕಂಪನಿಗಳು ಜಾಹೀರಾತು ನೀಡುವುದರಿಂದ ಹಿಂದೆ ಸರಿದಿವೆ. 'ಇದು ಜವಾಬ್ದಾರಿಯುತ ಬ್ರ್ಯಾಂಡ್‌ವೊಂದು ನಿಜಕ್ಕೂ ಮಾಡಬೇಕಾದ ಕಾರ್ಯ. ಪಾರ್ಲೆ ಮೇಲೆ ಗೌರವ ಮತ್ತಷ್ಟು ಹೆಚ್ಚಿದೆ. ವಿಷಯುಕ್ತ ವಿಚಾರಗಳನ್ನು ಹರಡುತ್ತಿರುವುದು ಒಂದೇ ನ್ಯೂಸ್ ಚಾನೆಲ್ ಅಲ್ಲ. ಬಹಳಷ್ಟು ಚಾನೆಲ್‌ಗಳು, ಪತ್ರಿಕೋದ್ಯಮವೇ ಆ ಹಂತಕ್ಕೆ ತಲುಪಿದೆ' ಎಂದು ಟ್ವೀಟಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಇದರೊಂದಿಗೆ ಪಾರ್ಲೆಜಿ ಬಿಸ್ಕೆಟ್‌ಗಳ ಚಿತ್ರಗಳನ್ನು ಹಂಚಿಕೊಂಡು 'ಬಾಲ್ಯದ ದಿನಗಳಿಂದಲೂ ಜೊತೆಯಾಗಿರುವ ನೀನು ನನ್ನ ಅಚ್ಚು ಮೆಚ್ಚು', 'ಒಳ್ಳೆಯ ನಿರ್ಧಾರ ಪಾರ್ಲೆ', 'ಜಗತ್ತನ್ನೇ ಬದಲಿಸಬೇಕೆಂದರೆ, ಮೊದಲು ನಾವು ಬದಲಾಗಬೇಕು. ಬದಲಾವಣೆಯನ್ನು ಪಾರ್ಲೆ ಮತ್ತು ಬಜಾಜ್ ಮುನ್ನಡೆಸಿವೆ' ಎಂದೆಲ್ಲ ಪ್ರಕಟಿಸಿಕೊಳ್ಳಲಾಗಿದೆ. ಹಲವರು ಈ ನಿರ್ಧಾರಗಳನ್ನು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.