ADVERTISEMENT

ಎಫ್‌ಎಟಿಎಫ್‌ ಷರತ್ತು ಪಾಲಿಸಿದ ಭಾರತ

ಪಿಟಿಐ
Published 10 ಸೆಪ್ಟೆಂಬರ್ 2024, 15:00 IST
Last Updated 10 ಸೆಪ್ಟೆಂಬರ್ 2024, 15:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಉಗ್ರರಿಗೆ ಹಣಕಾಸಿನ ನೆರವು ಹಾಗೂ ಹಣ ಅಕ್ರಮ ವರ್ಗಾವಣೆಗೆ ಕಡಿವಾಣ ಹಾಕುವಲ್ಲಿ ಅಮೆರಿಕ, ಜಪಾನ್‌, ಚೀನಾ ಮತ್ತು ಜರ್ಮನಿ ದಿಟ್ಟ ಕ್ರಮಕೈಗೊಂಡಿವೆ. ಭಾರತ ಕೂಡ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನೀತಿ ರೂಪಿಸಿದ್ದು, ಈ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಹಣ ಅಕ್ರಮ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ಪೂರೈಕೆಗೆ ತಡೆ ಮತ್ತು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಮಗ್ರತೆಗೆ ಬೆದರಿಕೆ ಒಡ್ಡುವ ಕೃತ್ಯ ತಡೆಯುವ ಕೆಲಸವನ್ನು ಅಂತರರಾಷ್ಟ್ರೀಯ ಕಾರ್ಯಪಡೆ (ಎಫ್‌ಎಟಿಎಫ್‌) ಮಾಡುತ್ತದೆ.

ಸಿಂಗಪುರದಲ್ಲಿ ಜೂನ್‌ನಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಭಾರತ ಸಲ್ಲಿಸಿದ್ದ ಪರಸ್ಪರ ಮೌಲ್ಯಮಾಪನ ವರದಿಯನ್ನು ಈ ಕಾರ್ಯಪಡೆಯು ಸ್ವೀಕರಿಸಿದ್ದು, ಭಾರತವನ್ನು ‘ರೆಗ್ಯುಲರ್‌ ಫಾಲೊಅಪ್‌’ ವರ್ಗಕ್ಕೆ ಸೇರ್ಪ‌ಡೆಗೊಳಿಸಿದೆ. ಕಾರ್ಯಪಡೆಯು ಸೆಪ್ಟೆಂಬರ್‌ 19ರಂದು ಈ ವರದಿಯನ್ನು ಬಿಡುಗಡೆ ಮಾಡಲಿದೆ.

ADVERTISEMENT

‘ರೆಗ್ಯುಲರ್ ಫಾಲೊಅಪ್‌’ ವರ್ಗಕ್ಕೆ ಸೇರ್ಪಡೆಯಾಗಲು ಪ್ರತಿ ಮೂರು ವರ್ಷಕ್ಕೊಮ್ಮೆ ದೇಶವೊಂದು ಸ್ವಯಂಪ್ರೇರಿತವಾಗಿ ವರದಿ ಸಲ್ಲಿಸಬೇಕಿದೆ. ಈ ವರದಿಯನ್ನು ಕಾರ್ಯಪಡೆಯು ಮೌಲ್ಯಮಾಪನ ಮಾಡಲಿದೆ.

‘ಅಂತರರಾಷ್ಟ್ರೀಯ ಕಾರ್ಯಪಡೆ ವಿಧಿಸಿರುವ 40 ಷರತ್ತುಗಳ ಪೈಕಿ ಭಾರತವು 37 ಷರತ್ತುಗಳನ್ನು ಪೂರೈಸಿದೆ’ ಎಂದು ಮೂಲಗಳು ತಿಳಿಸಿವೆ. 

ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ತಡೆಗಟ್ಟುವಲ್ಲಿ ವಿಫಲವಾಗುವ ದೇಶಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.