ನವದೆಹಲಿ: 2024–25ರ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಭಾರತಕ್ಕೆ ವಿದೇಶಿ ನೇರ ಬಂಡವಾಳದ (ಎಫ್‌ಡಿಐ) ಒಳಹರಿವು ಶೇ 47.8ರಷ್ಟು ಏರಿಕೆ ಆಗಿದೆ. ಈ ಅವಧಿಯಲ್ಲಿ ಆಗಿರುವ ಎಫ್‌ಡಿಐ ಮೊತ್ತ ₹1.35 ಲಕ್ಷ ಕೋಟಿ (16.17 ಬಿಲಿಯನ್ ಡಾಲರ್) ಆಗಿದೆ.
2023–24ರ ಹಣಕಾಸು ವರ್ಷದ ಇದೇ ಅವಧಿಯ ಎಫ್‌ಡಿಐ ₹91,866 ಕೋಟಿ (10.94 ಬಿಲಿಯನ್ ಡಾಲರ್) ಆಗಿತ್ತು ಎಂದು ಸರ್ಕಾರದ ಅಂಕಿ–ಅಂಶಗಳು ಮಂಗಳವಾರ ತಿಳಿಸಿವೆ.
ಸೇವೆಗಳು, ಕಂಪ್ಯೂಟರ್ ಯಂತ್ರಾಂಶ ಹಾಗೂ ತಂತ್ರಾಂಶ, ದೂರಸಂಪರ್ಕ, ಆಟೊಮೊಬೈಲ್ ಮತ್ತು ಫಾರ್ಮಾ ವಲಯಗಳಲ್ಲಿ ಹೂಡಿಕೆ ಹೆಚ್ಚಳ ಆಗಿರುವುದೇ ಏರಿಕೆಗೆ ಕಾರಣ ಎಂದು ತಿಳಿಸಿದೆ.
ಮಾರಿಷಸ್, ಸಿಂಗಪುರ, ಅಮೆರಿಕ, ನೆದರ್ಲೆಂಡ್ಸ್, ಯುಎಇಯಿಂದ ಎಫ್‌ಡಿಐ ಹೆಚ್ಚಿದೆ. ಜಪಾನ್, ಬ್ರಿಟನ್ ಮತ್ತು ಜರ್ಮನಿಯಿಂದ ಒಳಹರಿವು ಕಡಿಮೆಯಾಗಿದೆ.
ಎಫ್‌ಡಿಐ ಆಕರ್ಷಿಸುವುದರಲ್ಲಿ ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರವು ₹71,216 ಕೋಟಿ (8.48 ಬಿಲಿಯನ್ ಡಾಲರ್) ಎಫ್‌ಡಿಐ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ ₹19,148 ಕೋಟಿ (2.28 ಬಿಲಿಯನ್ ಡಾಲರ್), ತೆಲಂಗಾಣ ₹9,070 ಕೋಟಿ (1.08 ಬಿಲಿಯನ್ ಡಾಲರ್) ಮತ್ತು ಗುಜರಾತ್ ₹8,565 ಕೋಟಿ (1.02 ಬಿಲಿಯನ್ ಡಾಲರ್) ಸ್ವೀಕರಿಸಿದೆ ಎಂದು ಅಂಕಿ–ಅಂಶಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.