ನವದೆಹಲಿ: ಹಬ್ಬದ ಋತುವಿನ ಮಾರಾಟವು ಗ್ರಾಹಕ ಬಳಕೆ ಸರಕುಗಳ ಉದ್ಯಮದಲ್ಲಿ ಸಂಭ್ರಮಕ್ಕೆ ಮೂಡಿಸಿದೆ. ಸರಕು ಮತ್ತು ಸೇವೆಗಳ ಮಾರಾಟದ ಒಟ್ಟು ಮೌಲ್ಯವು₹ 2.5 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಹೇಳಿದೆ.
ಮಳಿಗೆಗಳು ಮತ್ತು ಇ–ಕಾಮರ್ಸ್ ವೇದಿಕೆಗಳ ಮೂಲಕ ಟಿ.ವಿ., ಗೃಹೋಪಯೋಗಿ ಉತ್ಪನ್ನಗಳು, ಎಫ್‌ಎಂಸಿಜಿ ಆಹಾರ ಮತ್ತು ಆಹಾರೇತರ ಉತ್ಪನ್ನಗಳು, ಬಟ್ಟೆಗಳ ಮಾರಾಟವು ಕಳೆದ ವರ್ಷದ ಹಬ್ಬದ ಋತುವಿನ ಮಾರಾಟಕ್ಕೆ ಹೋಲಿಸಿದರೆ ಶೇಕಡ 8ರಿಂದ ಶೇ 10ರಷ್ಟು ಬೆಳವಣಿಗೆ ಕಂಡಿದೆ. ಹಣದುಬ್ಬರದ ಆತಂಕದ ನಡುವೆಯೂ ಗ್ರಾಹಕರು ಖರೀದಿ ಮಾಡಲು ಮುಂದಾಗಿದ್ದಾರೆ ಎಂದು ಅದು ತಿಳಿಸಿದೆ. ಹಬ್ಬದ ಮಾರಾಟವು ಓಣಂನಿಂದ ಆರಂಭ ಆಗಿ, ದೀಪಾವಳಿಗೆ ಮುಕ್ತಾಯ ಆಗುತ್ತದೆ.
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿ.ಎ) ಶೇ 4ರಷ್ಟು ಹೆಚ್ಚಳ ಆಗಿರುವುದು ಖರೀದಿಗೆ ಉತ್ತೇಜನ ನೀಡಿದೆ. ಅಲ್ಲದೆ, ನಾನ್ ಗೆಜೆಟೆಡ್ ರೈಲ್ವೆ ನೌಕರರಿಗೆ ಕಾರ್ಯಕ್ಷಮತೆ ಆಧರಿಸಿದ ಬೋನಸ್ (ಪಿಎಲ್‌ಬಿ) ನೀಡಲು ಸರ್ಕಾರ ನಿರ್ಧರಿಸಿದೆ. ಇದು ಸಹ ಖರೀದಿ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಿದೆ.
ಈ ಹಬ್ಬದ ಋತುವಿನಲ್ಲಿ ಆಹಾರ ಉತ್ಪನ್ನಗಳು, ತಂಪುಪಾನೀಯಗಳು ಮತ್ತು ವೈಯಕ್ತಿಕ ಕಾಳಜಿಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆಯನ್ನು ನಿರೀಕ್ಷಿಸಲಾಗಿದೆ ಎಂದು ಡಾಬರ್ ಇಂಡಿಯಾದ ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಆದರ್ಶ್ ಶರ್ಮಾ ಹೇಳಿದ್ದಾರೆ.
ಕಡಿಮೆ ಬೆಲೆಯ ಉತ್ಪನ್ನಗಳ ಮಾರಾಟವು ಚೇತರಿಕೆ ಕಂಡುಕೊಳ್ಳುತ್ತಿಲ್ಲ. ಮಧ್ಯಮ ಮತ್ತು ಗರಿಷ್ಠ ಬೆಲೆಯ ಉತ್ಪನ್ನಗಳ ಮಾರಾಟ ಉತ್ತಮವಾಗಿದೆ. ಸರಾಸರಿ ಮಾರಾಟ ದರ ಹೆಚ್ಚಾಗುತ್ತಿದೆಯಾದರೂ ಗ್ರಾಮೀಣ ಭಾಗಗಳಲ್ಲಿ ಬೇಡಿಕೆ ಕಡಿಮೆ ಇರುವುದು ಉತ್ಪನ್ನಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘದ (ಸಿಇಎಎಂಎ) ಅಧ್ಯಕ್ಷ ಎರಿಕ್ ಬ್ರಗಾಂಜಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.