ADVERTISEMENT

ಹಬ್ಬದ ಋತು: ವಹಿವಾಟು ಜೋರು

ಹೆಚ್ಚಿನ ಹಣದುಬ್ಬರದ ನಡುವೆಯೂ ರಿಯಾಲ್ಟಿ, ಫ್ಯಾಷನ್ ವಿಭಾಗಗಳಲ್ಲಿ ಮಾರಾಟ ಚುರುಕು

ವಿಜಯ್ ಜೋಷಿ
Published 29 ಸೆಪ್ಟೆಂಬರ್ 2022, 20:24 IST
Last Updated 29 ಸೆಪ್ಟೆಂಬರ್ 2022, 20:24 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಶ್ರಾವಣ ಮಾಸದಿಂದ ಆರಂಭವಾದ ಹಬ್ಬಗಳ ಋತುವಿನಲ್ಲಿ ಮಾರುಕಟ್ಟೆಯಲ್ಲಿ ಲವಲವಿಕೆ ಕಂಡುಬಂದಿದೆ. ರಿಯಾಲ್ಟಿ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಸರಕುಗಳು (ಎಫ್‌ಎಂಸಿಜಿ), ಬಟ್ಟೆ ಖರೀದಿ ಜೋರಾಗಿ ನಡೆದಿದೆ. ಸರಕು ಸಾಗಣೆಯಲ್ಲಿ ಚೇತರಿಕೆ ಆಗಿದೆ.

ಹಬ್ಬದ ಋತು ಪೂರ್ಣಗೊಳ್ಳುವ ಹೊತ್ತಿಗೆ ಇನ್ನಷ್ಟು ಉತ್ತಮ ಪ್ರಮಾಣದ ವಹಿವಾಟು ನಡೆಯುವ ವಿಶ್ವಾಸವನ್ನು ವಿವಿಧ ವಲಯಗಳ ಪ್ರಮುಖ ಕಂಪನಿಗಳು ವ್ಯಕ್ತಪಡಿಸಿವೆ. ‘ಹಬ್ಬದ ಋತುವಿನಲ್ಲಿ ನಾವು ಶೇಕಡ 80ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಹೊಂದಿದ್ದೇವೆ’ ಎಂದು ಸರಕು ಸಾಗಣೆ ಕಂಪನಿ ಇನ್‌ಸ್ಟಾಮೊಜೊ ತಿಳಿಸಿದೆ. ಇದು ವರ್ತಕರಿಂದ ಉತ್ಪನ್ನವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ವಹಿವಾಟಿನಲ್ಲಿ ತೊಡಗಿಸಿಕೊಂಡಿದೆ.

ಬಟ್ಟೆ, ಫ್ಯಾಷನ್ ಧಿರಿಸುಗಳು, ಪಾದರಕ್ಷೆಗಳನ್ನು ಗ್ರಾಹಕರು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಹೆಚ್ಚಿನ ಬೇಡಿಕೆಯು ಎರಡನೆಯ ಹಾಗೂ ಮೂರನೆಯ ಹಂತಗಳ ನಗರಗಳಿಂದ ಬರುತ್ತಿದೆ ಎಂದು ಅದು ತಿಳಿಸಿದೆ.

ADVERTISEMENT

ಫ್ಯಾಷನ್, ಲೈಫ್‌ಸ್ಟೈಲ್‌ ವಲಯವು ಹಬ್ಬಗಳ ಸಂದರ್ಭದಲ್ಲಿ ಒಳ್ಳೆಯ ಬೆಳವಣಿಗೆ ದಾಖಲಿಸುತ್ತಿರುವುದನ್ನು ರಿಲಯನ್ಸ್‌ ರಿಟೇಲ್‌ನ ಫ್ಯಾಷನ್ ಮತ್ತು ಲೈಫ್‌ಸ್ಟೈಲ್‌ ವಿಭಾಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಖಿಲೇಶ್ ‍ಪ್ರಸಾದ್ ಖಚಿತಪಡಿಸುತ್ತಾರೆ. ‘ಈ ವರ್ಷ ನಾವು ಒಳ್ಳೆಯ ಬೆಳವಣಿಗೆ ಕಾಣುತ್ತಿದ್ದೇವೆ. ಕೋವಿಡ್‌ ಪೂರ್ವದ ಸ್ಥಿತಿಗೆ (2019ಕ್ಕೆ) ಹೋಲಿಸಿದರೆ ಈ ಬಾರಿ ಎರಡು ಅಂಕಿಗಳ ಬೆಳವಣಿಗೆ ಕಂಡಿದ್ದೇವೆ’ ಎಂದು ‘ಪ್ರಜಾವಾಣಿ’ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಚಿಲ್ಲರೆ ಹಣದುಬ್ಬರ ದರ ಹೆಚ್ಚಿದ್ದರೂ, ‘ಈ ಬಾರಿ ಸೆಪ್ಟೆಂಬರ್‌ ತಿಂಗಳಲ್ಲಿ ನಾವು ಅತ್ಯಂತ ಹೆಚ್ಚಿನ ಪ್ರಮಾಣದ ಮಾರಾಟ ದಾಖಲಿಸಿದ್ದೇವೆ’ ಎಂದು ಅವರು ವಿವರಿಸಿದರು.

ಹಬ್ಬದ ಋತುವು ರಿಯಲ್ ಎಸ್ಟೇಟ್ ಉದ್ಯಮ ವಲಯದಲ್ಲಿ ಚೇತರಿಕೆ ತಂದಿದೆ. ‘ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಮಾರಾಟದಲ್ಲಿ ಶೇಕಡ 64ರಷ್ಟು ಏರಿಕೆ ಕಂಡುಬಂದಿದೆ. ಆ ಅವಧಿಯಲ್ಲಿ ನಾವು ದಾಖಲಿಸಿದ್ದು ಮೊದಲ ತ್ರೈಮಾಸಿಕದಲ್ಲಿನ ಅತಿಹೆಚ್ಚಿನ ಮಾರಾಟ’ ಎಂದು ರಿಯಲ್ ಎಸ್ಟೇಟ್ ಕಂಪನಿ ಪುರವಂಕರ ಲಿಮಿಟೆಡ್‌ನ ಸಿಇಒ ಅಭಿಷೇಕ್ ಕಪೂರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಐ.ಟಿ. ವಲಯದಿಂದ ಯಾವ ಸಂದರ್ಭದಲ್ಲಿಯೂ ಬೇಡಿಕೆ ಕಡಿಮೆ ಆಗಿಯೇ ಇರಲಿಲ್ಲ ಎಂದು ಅವರು ಹೇಳಿದರು.

ಸಾಲದ ಮೇಲಿನ ಬಡ್ಡಿ ದರ ಈಗಾಗಲೇ ಹೆಚ್ಚಳ ಕಂಡಿದೆ. ಆರ್‌ಬಿಐ ರೆಪೊ ದರವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ‘ಆದರೆ, ಬಡ್ಡಿ ದರ ಹೆಚ್ಚಳದಿಂದ ಮನೆ ಖರೀದಿಸುವವರು ಹಿಂದೇಟು ಹಾಕುವುದಿಲ್ಲ’ ಎಂಬುದು ಕಪೂರ್ ಅವರಲ್ಲಿನ ಭರವಸೆ.

2022–23ರ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ವಸತಿ ವಿಭಾಗದಲ್ಲಿನ ಮಾರಾಟ ಪ್ರಮಾಣದಲ್ಲಿ ಶೇಕಡ 300ರಷ್ಟು ಏರಿಕೆ ಕಂಡುಬಂದಿದೆ ಎಂದು ಎಂಬಸಿ ಸಮೂಹದ ವಸತಿ ವಿಭಾಗದ ಅಧ್ಯಕ್ಷೆ ರೀಜಾ ಸೆಬಾಸ್ಟಿಯನ್ ಕರಿಂಪನಾಲ್ ಹೇಳಿದ್ದಾರೆ. ಐಷಾರಾಮಿ ವಿಭಾಗದ ಮನೆಗಳ ಬಗ್ಗೆ ಗ್ರಾಹಕರು ವಿಚಾರಿಸುವುದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 261ರಷ್ಟು ಜಾಸ್ತಿ ಆಗಿದೆ ಎಂದು ಅವರು ತಿಳಿಸಿದ್ದಾರೆ.

‘ಬೇರೆ ಬೇರೆ ಸರಕುಗಳ ಬೆಲೆ ತಗ್ಗುತ್ತಿರುವ ಕಾರಣ ಖರೀದಿ ಚಟುವಟಿಕೆ ಹೆಚ್ಚಾಗಲು ಅವಕಾಶವಿದೆ. ಮುಂಬರುವ ತ್ರೈಮಾಸಿಕದಲ್ಲಿ ಆರೋಗ್ಯಕರ ಬೆಳವಣಿಗೆ ಇರಲಿದೆ ಎಂಬುದು ನಮ್ಮ ನಿರೀಕ್ಷೆ. ಕ್ರಿಸ್ಮಸ್‌ವರೆಗೂ ಬೇಡಿಕೆಯು ದೊಡ್ಡ ಮಟ್ಟದಲ್ಲಿ ಇರಲಿದೆ’ ಎಂದು ದೇಶದ ಅತಿದೊಡ್ಡ ಎಫ್‌ಎಂಸಿಜಿ ಕಂಪನಿಗಳಲ್ಲಿ ಒಂದಾಗಿರುವ ಅದಾನಿ ವಿಲ್ಮರ್ ವಕ್ತಾರರು ತಿಳಿಸಿದ್ದಾರೆ.

'ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಕಡಿಮೆ’

ಈ ಬಾರಿಯ ಹಬ್ಬದ ಋತುವಿನಲ್ಲಿ ಮಾರಾಟ ಪ್ರಮಾಣವು ಕೋವಿಡ್‌ ಪೂರ್ವದ ಮಟ್ಟಕ್ಕಿಂತ ಜಾಸ್ತಿ ಇರಲಿದೆ. ಸಾಂಕ್ರಾಮಿಕದ ಪ್ರಭಾವ ಕಡಿಮೆ ಆಗಿರುವುದು, ಜನರು ಮಾರುಕಟ್ಟೆಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಇದಕ್ಕೆ ಕಾರಣ ಎಂದು ಬ್ರೋಕರೇಜ್ ಸಂಸ್ಥೆ ಶೇರ್‌ಖಾನ್‌ ಬೈ ಬಿಎನ್‌ಪಿ ಪಾರಿಬಾಸ್‌ನ ವಿಶ್ಲೇಷಕ ಕೌಸ್ತುಭ್ ಪವಾಸ್ಕರ್ ಹೇಳಿದರು.

ಪಾದರಕ್ಷೆಗಳು ಹಾಗೂ ಬಟ್ಟೆಗಳ ಮಾರಾಟ ಈ ಬಾರಿ ಹೆಚ್ಚುವ ನಿರೀಕ್ಷೆ ಇದೆ. ಹಿಂದಿನ ಎರಡು ವರ್ಷಗಳ ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಅಂಗಡಿಗಳ ಮೂಲಕ ಭೌತಿಕವಾಗಿ ಆಗುವ ಮಾರಾಟ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದರು.

ಗ್ರಾಮೀಣ ಭಾಗಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಬೇಡಿಕೆಯು ಹೆಚ್ಚಿನ ಚೇತರಿಕೆ ಕಂಡಿದೆ. ಹಣದುಬ್ಬರವು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಎರಡು–ಮೂರು ತ್ರೈಮಾಸಿಕಗಳಿಂದ ಹೆಚ್ಚಿನ ಮಟ್ಟದಲ್ಲಿ ಇಲ್ಲ. ಆದರೆ, ಹಣದುಬ್ಬರ ತಗ್ಗಿದಾಗ ಈ ಪರಿಸ್ಥಿತಿ ತಿಳಿಯಾಗುತ್ತದೆ ಎಂದು ಪವಾಸ್ಕರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.