ನವದೆಹಲಿ: ಒಯೊ ಕಂಪನಿಯ ಐಪಿಒ ಪ್ರಕ್ರಿಯೆಯನ್ನು ಅಮಾನತಿನಲ್ಲಿ ಇರಿಸಬೇಕು ಎಂದು ಕೋರಿ ಹೊಟೆಲ್ ಮತ್ತು ರೆಸ್ಟಾರೆಂಟ್ ಸಂಘಗಳ ಒಕ್ಕೂಟವು (ಎಫ್‌ಎಚ್‌ಆರ್‌ಎಐ) ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ ಮತ್ತೆ ಮನವಿ ಮಾಡಿದೆ. ತೆರಿಗೆ ವಂಚನೆ ಪ್ರಕರಣವೊಂದರಲ್ಲಿ ಒಯೊ ವಿರುದ್ಧ ತನಿಖೆ ನಡೆಯುತ್ತಿದ್ದು, ಅದನ್ನು ಕಂಪನಿಯು ಬಹಿರಂಗಪಡಿಸಿಲ್ಲ ಎಂಬುದು ಒಕ್ಕೂಟದ ಆರೋಪ.
ಆದರೆ, ಈ ಆರೋಪವನ್ನು ಒಯೊ ಅಲ್ಲಗಳೆದಿದೆ. ‘ಐಪಿಒಗೆ ಸೆಬಿಯಿಂದ ಅನುಮತಿ ಪಡೆಯಲು ಅಗತ್ಯವಿರುವ ವಿವರಗಳನ್ನು ಬಹಿರಂಗಪಡಿಸುವ ಮಟ್ಟವನ್ನು ತಲುಪಲು ಒಯೊ ವಿಫಲವಾಗಿದೆ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೈಸನ್ ಚಾಕೊ ಸೆಬಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.‘ಒಕ್ಕೂಟದ ಆರೋಪಗಳನ್ನು ನಾವು ಅಲ್ಲಗಳೆಯುತ್ತಿದ್ದೇವೆ. ಕಂಪನಿಯು ತೆರಿಗೆ ವಂಚನೆ ಮಾಡಿಲ್ಲ’ ಎಂದು ಒಯೊ ವಕ್ತಾರರು ಹೇಳಿದ್ದಾರೆ.
ಒಕ್ಕೂಟವು ಒಯೊ ಕಂಪನಿಯ ಐಪಿಒ ಪ್ರಕ್ರಿಯೆಯನ್ನು ಅಮಾನತಿನಲ್ಲಿ ಇರಿಸಬೇಕು ಎಂದು ಅಕ್ಟೋಬರ್‌ನಲ್ಲಿಯೂ ಆಗ್ರಹಿಸಿತ್ತು. ಕಂಪನಿಯು ಸ್ಪರ್ಧಾತ್ಮಕತೆಯ ವಿರೋಧಿ ಧೋರಣೆ ತೋರಿದೆ, ನ್ಯಾಯಾಲಯಗಳಲ್ಲಿ ಇರುವ ಮಹತ್ವದ ಪ್ರಕರಣಗಳ ಬಗ್ಗೆ ಸೂಕ್ತ ವಿವರ ನೀಡಿಲ್ಲ ಎಂದು ಆರೋಪಿಸಿತ್ತು. ಆಗ ಈ ಆರೋಪಗಳನ್ನು ಒಯೊ ಅಲ್ಲಗಳೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.