ಬೆಂಗಳೂರು: ವಿದೇಶಿ ಬಂಡವಾಳ ಹೂಡಿಕೆದಾರರನ್ನು ಮತ್ತೆ ಷೇರುಗಳ ಖರೀದಿಗೆ ಆಕರ್ಷಿಸುವಂತಹ ವಿದ್ಯಮಾನಗಳು ಈಚೆಗೆ ನಡೆಯುತ್ತಿವೆ. ಅದರಲ್ಲಿ ಮುಖ್ಯವಾಗಿರುವುದು ಅಮೆರಿಕದಲ್ಲಿ ಹಣದುಬ್ಬರ ಇಳಿಕೆ ಕಂಡಿರುವುದು ಮತ್ತು ಅಮೆರಿಕದ ಬಾಂಡ್ ಗಳಿಕೆ ಪ್ರಮಾಣ ಕಡಿಮೆ ಆಗಿರುವುದು.
ಈಚೆಗೆ ಅಮೆರಿಕದಲ್ಲಿ ಹಣದುಬ್ಬರದ ಮಾಹಿತಿ ಬಿಡುಗಡೆ ಆಗಿದ್ದು, ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ 3.7ರಷ್ಟು ಇದ್ದಿದ್ದು ಅಕ್ಟೋಬರ್‌ನಲ್ಲಿ ಶೇ 3.2ಕ್ಕೆ ಇಳಿಕೆ ಕಂಡಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ ಪ್ರವೃತ್ತಿಗೆ ಅಂತ್ಯ ಹಾಡುವ ಭರವಸೆಯನ್ನು ಇದು ನೀಡಿದೆ. ಇನ್ನು, ಅಮೆರಿಕದ 10 ವರ್ಷಗಳ ಬಾಂಡ್ ಮೇಲಿನ ಹೂಡಿಕೆಯಿಂದ ಬರುವ ಲಾಭವು ಅಕ್ಟೋಬರ್‌ನಲ್ಲಿ ಇದ್ದ ಶೇ 5ರ ಗರಿಷ್ಠ ಮಟ್ಟದಿಂದ ಸದ್ಯ ಶೇ 4.44ಕ್ಕೆ ಇಳಿಕೆ ಕಂಡಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಾರಾಟ ಮಾಡುವ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ. ಗುರುವಾರದ ಮತ್ತು ಶುಕ್ರವಾರದ ವಹಿವಾಟಿನಲ್ಲಿ ಒಟ್ಟು ₹2,880 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಮತ್ತೆ ಅವರು ಹೂಡಿಕೆ ಮಾಡಲಿರುವ ಸೂಚನೆಯನ್ನು ಇದು ನೀಡುತ್ತಿದೆ.
‘ಸದ್ಯ ಷೇರುಪೇಟೆಯಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಭರಾಟೆ ಜೋರಾಗಿದೆ. ಹೀಗಾಗಿ ಹೂಡಿಕೆದಾರರು ಅತ್ತ ಗಮನ ಹರಿಸಿರುವುದರಿಂದ ಈ ವಾರ ಲಾಭ ಗಳಿಕೆಯ ವಹಿವಾಟು ನಡೆದು, ಗ್ರಾಹಕ ಬಳಕೆ ವಸ್ತುಗಳು ಮತ್ತು ರಿಯಾಲ್ಟಿ ವಲಯ ನಷ್ಟ ಕಾಣುವಂತಾಯಿತು’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.