ADVERTISEMENT

ಬ್ಯಾಂಕ್‌ಗಳ ಆಸ್ತಿ–ಹೊರೆ ಭಾರಿ ವ್ಯತ್ಯಾಸ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಪಿಟಿಐ
Published 19 ಆಗಸ್ಟ್ 2024, 16:06 IST
Last Updated 19 ಆಗಸ್ಟ್ 2024, 16:06 IST
<div class="paragraphs"><p>–ಪಿಟಿಐ ಚಿತ್ರ</p></div>
   

–ಪಿಟಿಐ ಚಿತ್ರ

ನವದೆಹಲಿ: ‘ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಠೇವಣಿ ಸಂಗ್ರಹ ಹೆಚ್ಚಳಕ್ಕೆ ಒತ್ತು ನೀಡಬೇಕಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೂಚಿಸಿದರು.

ಸೋಮವಾರ ನಡೆದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಕಳೆದ ಕೆಲವು ತಿಂಗಳುಗಳಿಂದ ಬ್ಯಾಂಕ್‌ಗಳ ಸಾಲ ನೀಡಿಕೆಗೆ ಹೋಲಿಸಿದರೆ ಠೇವಣಿ ಸಂಗ್ರಹವು ಶೇ 3ರಿಂದ ಶೇ 4ರಷ್ಟು ಕಡಿಮೆಯಿದೆ. ಆಸ್ತಿ ಮತ್ತು ಹೊರೆ ನಡುವಿನ ಅಸಮತೋಲನ ಹೆಚ್ಚಾಗಿದೆ. ಈ ಬಗ್ಗೆ ಬ್ಯಾಂಕ್‌ಗಳು ಎಚ್ಚರಿಕೆ ವಹಿಸುವ ಅಗತ್ಯವಿದೆ’ ಎಂದು ಹೇಳಿದರು.

ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣ ಹೆಚ್ಚುತ್ತಿದೆ. ಇದರ ಸುಸ್ಥಿರತೆ ಕಾಯ್ದುಕೊಳ್ಳಲು ಠೇವಣಿಗಳ ಸಂಗ್ರಹಕ್ಕೂ ಒತ್ತು ನೀಡಬೇಕಿದೆ ಎಂದರು.

ಬ್ಯಾಂಕ್‌ ಸಿಬ್ಬಂದಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳ ವ್ಯಾಪ್ತಿಯ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಸೈಬರ್‌ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಸೂಚಿಸಿದರು.

ಯೋಜನೆಗಳ ಪರಾಮರ್ಶೆ:

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ಆವಾಸ್‌ ಯೋಜನೆ, ಪಿಎಂ ಸೂರ್ಯ ಘರ್‌ ಹಾಗೂ ಪಿಎಂ ವಿಶ್ವಕರ್ಮ ಯೋಜನೆ ಸೇರಿ ಹಲವು ಯೋಜನೆಗಳ ಬಗ್ಗೆ ನಿರ್ಮಲಾ ಅವರು, ಪರಿಶೀಲನೆ ನಡೆಸಿದರು. 

ಸಾಲ ಮತ್ತು ಠೇವಣಿ ಅನುಪಾತ (ಸಿ:ಡಿ) ಹಾಗೂ ಬ್ಯಾಂಕ್‌ಗಳ ಆಸ್ತಿ ಗುಣಮಟ್ಟದ ಬಗ್ಗೆಯೂ ಪರಿಶೀಲಿಸಿದರು.

ನಿವ್ವಳ ಲಾಭ ಏರಿಕೆ

2023–24ನೇ ಆರ್ಥಿಕ ಸಾಲಿನಡಿ ಸಾರ್ವಜನಿಕ ವಲಯದ 12 ಬ್ಯಾಂಕ್‌ಗಳು ₹1.40 ಲಕ್ಷ ಕೋಟಿ ನಿವ್ವಳ ಲಾಭ ಗಳಿಸಿವೆ. 2022–23ನೇ ಸಾಲಿನಲ್ಲಿ ₹1 ಲಕ್ಷ ಕೋಟಿ ಲಾಭ ಗಳಿಸಿದ್ದವು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 35ರಷ್ಟು ಹೆಚ್ಚಳವಾಗಿದೆ. ಈ ಪೈಕಿ ಸ್ಟೇಟ್‌ ಬ್ಯಾಂಕ್‌ ಇಂಡಿಯಾದ (ಎಸ್‌ಬಿಐ) ಪಾಲು ಶೇ 40ರಷ್ಟಿದೆ.  2023–24ನೇ ಆರ್ಥಿಕ ವರ್ಷದಲ್ಲಿ ಎಸ್‌ಬಿಐ ₹61077 ಕೋಟಿ ನಿವ್ವಳ ಲಾಭ ಗಳಿಸಿದೆ. 2022–23ರಲ್ಲಿ ₹50232 ಕೋಟಿ ಲಾಭ ಗಳಿಸಿತ್ತು. ಒಟ್ಟಾರೆ ಲಾಭದಲ್ಲಿ ಶೇ 22ರಷ್ಟು ಏರಿಕೆಯಾಗಿದೆ.

2023–24ರಲ್ಲಿ ಬ್ಯಾಂಕ್‌ಗಳ ನಿವ್ವಳ ಎನ್‌ಪಿಎ ಶೇ 0.76ಕ್ಕೆ ಇಳಿಕೆಯಾಗಿದೆ. ನಿವ್ವಳ ಬಡ್ಡಿ ಲಾಭ (ಎನ್‌ಐಎಂ) ಶೇ 3.22ರಷ್ಟಿದೆ. ಸಮರ್ಪಕ ಬಂಡವಾಳ ಅನುಪಾತ (ಸಿಎಆರ್‌) ಶೇ 15.55ರಷ್ಟಿದೆ. ಗ್ರಾಹಕರಿಗೆ ₹27830 ಕೋಟಿ ಲಾಭಾಂಶ ವಿತರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.