ADVERTISEMENT

ತಗ್ಗಿದ ಸರಾಸರಿ ಎನ್‌ಪಿಎ | 12 ವರ್ಷಗಳ ಕನಿಷ್ಠ ಮಟ್ಟಕ್ಕೆ ದಾಖಲು: ಆರ್‌ಬಿಐ ವರದಿ

ಪಿಟಿಐ
Published 27 ಜೂನ್ 2024, 16:41 IST
Last Updated 27 ಜೂನ್ 2024, 16:41 IST
,,,,,,
,,,,,,   

ಮುಂಬೈ: ದೇಶದ ಆರ್ಥಿಕತೆ ಹಾಗೂ ಹಣಕಾಸು ವ್ಯವಸ್ಥೆಯು ಸದೃಢವಾಗಿದೆ. ಮಾರ್ಚ್‌ ಅಂತ್ಯಕ್ಕೆ ವಾಣಿಜ್ಯ ಬ್ಯಾಂಕ್‌ಗಳ ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು 12 ವರ್ಷಗಳ ಕನಿಷ್ಠ ಮಟ್ಟವಾದ ಶೇ 2.8ರಷ್ಟಕ್ಕೆ ತಗ್ಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ಸ್ಥಿರತೆ ವರದಿ ಹೇಳಿದೆ.

ನಿವ್ವಳ ಎನ್‌ಪಿಎ ಪ್ರಮಾಣ ಶೇ 0.6ಕ್ಕೆ ಇಳಿಕೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಈ ಬ್ಯಾಂಕ್‌ಗಳ ಸರಾಸರಿ ಎನ್‌‍ಪಿಎ ಪ್ರಮಾಣವು ಶೇ 2.5ಕ್ಕೆ ಇಳಿಕೆಯಾಗಲಿದೆ. ಬ್ಯಾಂಕ್‌ಗಳ ಆಸ್ತಿ ಗುಣಮಟ್ಟವೂ ಸುಧಾರಣೆ ಕಂಡಿದೆ ಎಂದು ಗುರುವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ.

ಆರ್ಥಿಕತೆ ಬೆಳವಣಿಗೆ ಮತ್ತು ಹಣಕಾಸು ವ್ಯವಸ್ಥೆಯ ಚೇತರಿಕೆ ಮತ್ತು ಸದೃಢತೆಗೆ ದೇಶದ ಸ್ಥೂಲ ಆರ್ಥಿಕ ಸ್ಥಿರತೆಯು ನೆರವಾಗಿದೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ನಗದು ಲಭ್ಯತೆ ಪ್ರಮಾಣ ಹೆಚ್ಚಿದೆ. ಅಲ್ಲದೆ, ಸಾಲ ನೀಡಿಕೆಯಲ್ಲಿ ಸುಸ್ಥಿರತೆ ಕಾಯ್ದುಕೊಂಡಿರುವುದು ಆರ್ಥಿಕ ಚಟುವಟಿಕೆಗಳಿಗೆ ವರದಾನವಾಗಿದೆ ಎಂದು ಹೇಳಿದೆ.

ADVERTISEMENT

ಬ್ಯಾಂಕ್‌ಗಳ ಸುರಕ್ಷತೆಯ ಮಾನದಂಡವಾದ ಬಂಡವಾಳ ಪರ್ಯಾಪ್ತತಾ ಅನುಪಾತ  (ಸಿಆರ್‌ಎಆರ್‌) ಶೇ 16.8ರಷ್ಟಿದೆ. ಬಂಡವಾಳ ಸೃಷ್ಟಿಯಲ್ಲಿ ಹೊಂದಿರುವ ಸಾಮಾನ್ಯ ಈಕ್ವಿಟಿ ಶ್ರೇಣಿ 1 (ಸಿಇಟಿ1) ಅನುಪಾತವು ಶೇ 13.9ರಷ್ಟಿದೆ ಎಂದು ವಿವರಿಸಿದೆ.

2023–24ನೇ ಹಣಕಾಸು ವರ್ಷದ ದ್ವಿತಿಯಾರ್ಧದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಜಿಎನ್‌ಪಿಎ ಶೇ 0.76ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ.

ಎನ್‌ಬಿಎಫ್‌ಸಿ ಸ್ಥಿತಿಗತಿ ಏನು?

ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ಬಂಡವಾಳ ಪರ್ಯಾಪ್ತತಾ ಅನುಪಾತವೂ ಉತ್ತಮವಾಗಿದೆ ಎಂದು ವರದಿ ತಿಳಿಸಿದೆ. ಸಿಆರ್‌ಎಆರ್‌ ಶೇ 26.6ರಷ್ಟು ಹಾಗೂ ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 4.0ರಷ್ಟಿದೆ. ಕಂಪನಿಗಳ ಸ್ವತ್ತು ಮೇಲಿನ ಆದಾಯವು ಶೇ 3.3ರಷ್ಟಿದೆ ಎಂದು ತಿಳಿಸಿದೆ.

ಜಾಗತಿಕ ಆರ್ಥಿಕತೆ ಕುರಿತಂತೆ ವರದಿಯು ಕಳವಳ ವ್ಯಕ್ತಪಡಿಸಿದೆ. ಇಸ್ರೇಲ್‌–ಗಾಜಾ ನಡುವಿನ ಬಿಕ್ಕಟ್ಟು ಮುಂದುವರಿದಿದೆ.

ಇದು ಸಾರ್ವಜನಿಕ ಸಾಲದ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಲಿದೆ. ಚಿಲ್ಲರೆ ಹಣದುಬ್ಬರ ಇಳಿಕೆಯು ಮಂದಗತಿಯಲ್ಲಿದೆ ಎಂದು ಹೇಳಿದೆ. ಈ ಸವಾಲುಗಳ ನಡುವೆಯೂ ಜಾಗತಿಕ ಹಣಕಾಸು ವ್ಯವಸ್ಥೆಯು ಚೇತರಿಕೆಯ ಹಳಿಗೆ ಮರಳಿದೆ. ಆರ್ಥಿಕ ಸ್ಥಿತಿಗತಿಗಳು ಸ್ಥಿರವಾಗಿವೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.