ADVERTISEMENT

ಆಸ್ತಿ ನಗದೀಕರಣಕ್ಕೆ ಪ್ರತ್ಯೇಕ ಕಂಪನಿ

ಪಿಟಿಐ
Published 17 ಅಕ್ಟೋಬರ್ 2021, 16:42 IST
Last Updated 17 ಅಕ್ಟೋಬರ್ 2021, 16:42 IST
   

ನವದೆಹಲಿ: ಖಾಸಗೀಕರಣಕ್ಕೆ ಗುರುತಿಸಲಾಗಿರುವ ಕೇಂದ್ರ ಸರ್ಕಾರದ ಸ್ವಾಮ್ಯದ ಕಂಪನಿಗಳಿಗೆ ಸೇರಿದ ಜಮೀನು ಮತ್ತು ಇತರ ಪ್ರಮುಖವಲ್ಲದ ಸೊತ್ತುಗಳನ್ನು ನಗದೀಕರಿಸಿಕೊಳ್ಳಲು ಕಂಪನಿಯೊಂದನ್ನು ಆರಂಭಿಸಲು ಅನುಮತಿ ಕೋರಿ ಕೇಂದ್ರ ಹಣಕಾಸು ಸಚಿವಾಲಯವು ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಲಿದೆ.

ಈ ಆಸ್ತಿಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡು ಅವುಗಳನ್ನು ನಗದೀಕರಿಸಿಕೊಳ್ಳಲು ಒಂದು ಕಂಪನಿಯನ್ನು ರಚಿಸಲಾಗುತ್ತದೆ. ಈ ಕಂಪನಿಯು ಆಸ್ತಿಯನ್ನು ನಗದೀಕರಿಸಿ, ಬೊಕ್ಕಸಕ್ಕೆ ವರಮಾನ ತಂದುಕೊಡಲಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿಳಿಸಿದ್ದಾರೆ.

‘ಈ ಕಂಪನಿಯು ಹಲವು ವರ್ಷಗಳವರೆಗೆ ಇರಲಿದೆ. ಹೆಚ್ಚುವರಿ ಜಮೀನು ಹಾಗೂ ಪ್ರಮುಖವಲ್ಲದ ಆಸ್ತಿಗಳ ನಗದೀಕರಣದಲ್ಲಿ ಈ ಕಂಪನಿಯು ಪರಿಣತಿ ಸಾಧಿಸಲಿದೆ. ಕಂಪನಿಯು ಶೀಘ್ರದಲ್ಲೇ ಶುರುವಾಗುವ ನಿರೀಕ್ಷೆ ಇದೆ’ ಎಂದು ಪಾಂಡೆ ಅವರು ತಿಳಿಸಿದ್ದಾರೆ. ಸಂಪುಟದ ಅನುಮೋದನೆ ದೊರೆತ ನಂತರ, ಸರ್ಕಾರಿ ಉದ್ದಿಮೆಗಳ ಇಲಾಖೆಯು ಆಸ್ತಿ ನಗದೀಕರಣದ ಜವಾಬ್ದಾರಿ ವಹಿಸಿಕೊಳ್ಳಲಿದೆ.

ADVERTISEMENT

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಐಡಿಬಿಐ ಬ್ಯಾಂಕ್, ಬಿಇಎಂಎಲ್, ಪವನ್ ಹಂಸ, ನೀಲಾಚಲ್ ಇಸ್ಪ್ಯಾಟ್ ನಿಗಮ ಕಂಪನಿಗಳಲ್ಲಿನ ಷೇರುಗಳನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಾರಾಟ ಮಾಡಲು ಕೇಂದ್ರವು ಉದ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.