ADVERTISEMENT

ಹಿಗ್ಗಿದ ವಿತ್ತೀಯ ಕೊರತೆ ಅಂತರ: ಸಿಜಿಎ ವರದಿ

ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ₹8.7 ಲಕ್ಷ ಕೋಟಿ ತೆರಿಗೆ ವರಮಾನ ಸಂಗ್ರಹ

ಪಿಟಿಐ
Published 30 ಸೆಪ್ಟೆಂಬರ್ 2024, 13:44 IST
Last Updated 30 ಸೆಪ್ಟೆಂಬರ್ 2024, 13:44 IST
<div class="paragraphs"><p>ರೂಪಾಯಿ</p></div>

ರೂಪಾಯಿ

   

ನವದೆಹಲಿ: 2024–25ರ ಹಣಕಾಸು ವರ್ಷದ ಏಪ್ರಿಲ್-ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 27ರಷ್ಟು ಆಗಿದೆ ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಸೋಮವಾರ ಬಿಡುಗಡೆಗೊಳಿಸಿರುವ ವರದಿ ತಿಳಿಸಿದ್ದಾರೆ.

ವರಮಾನ ಮತ್ತು ವೆಚ್ಚದ ನಡುವಣ ಅಂತರವಾದ ವಿತ್ತೀಯ ಕೊರತೆಯು ಏಪ್ರಿಲ್‌–ಆಗಸ್ಟ್‌ನಲ್ಲಿ ಮೌಲ್ಯದ ಲೆಕ್ಕದಲ್ಲಿ ₹4.35 ಲಕ್ಷ ಕೋಟಿಯಷ್ಟಿದೆ. ಇದು 2023–24ನೇ ಸಾಲಿನ ಬಜೆಟ್‌ ಅಂದಾಜಿನ ಶೇ 36ರಷ್ಟು ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

2023–24ನೇ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯು ಶೇ 5.6ರಷ್ಟು ಇತ್ತು. ಇತ್ತೀಚೆಗೆ ಮಂಡನೆಯಾದ ಬಜೆಟ್‌ನಲ್ಲಿ 2024–25ನೇ ಆರ್ಥಿಕ ಸಾಲಿಗೆ ಜಿಡಿಪಿಯ ಶೇ 4.9ರಷ್ಟಕ್ಕೆ ತಗ್ಗಿಸುವ ಗುರಿ ನಿಗದಿಪಡಿಸಲಾಗಿದೆ. ಮೌಲ್ಯದ ಲೆಕ್ಕದಲ್ಲಿ ಇದು ₹16.13 ಲಕ್ಷ ಕೋಟಿ ಆಗಿದೆ.  

ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ₹8.7 ಲಕ್ಷ ಕೋಟಿ ನಿವ್ವಳ ತೆರಿಗೆ ವರಮಾನ ಸಂಗ್ರಹವಾಗಿದೆ. ಇದು ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ ಅಂದಾಜಿನ ಶೇ 33ರಷ್ಟಿದೆ. 

ಆಗಸ್ಟ್‌ ಅಂತ್ಯಕ್ಕೆ ಕೇಂದ್ರ ಸರ್ಕಾರದ ಒಟ್ಟು ವೆಚ್ಚವು ₹16.5 ಲಕ್ಷ ಕೋಟಿ ಆಗಿದೆ. ಇದು ಬಜೆಟ್‌ ಅಂದಾಜಿನ ಶೇ 34ರಷ್ಟಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಸರ್ಕಾರದ ವೆಚ್ಚವು ಶೇ 37ರಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.