ನವದೆಹಲಿ: 2024–25ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 8.1ರಷ್ಟು ಆಗಿದೆ ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಬುಧವಾರ ಬಿಡುಗಡೆಗೊಳಿಸಿರುವ ವರದಿ ತಿಳಿಸಿದೆ.
ವರಮಾನ ಮತ್ತು ವೆಚ್ಚದ ನಡುವಣ ಅಂತರವಾದ ವಿತ್ತೀಯ ಕೊರತೆಯು ಏಪ್ರಿಲ್–ಜೂನ್ ಅವಧಿಯಲ್ಲಿ ಮೌಲ್ಯದ ಲೆಕ್ಕದಲ್ಲಿ ₹1.35 ಲಕ್ಷ ಕೋಟಿಯಷ್ಟಿದೆ. 2023–24ನೇ ಸಾಲಿನ ಬಜೆಟ್ ಅಂದಾಜಿನ ಶೇ 25.3ರಷ್ಟು ಆಗಿದೆ ಎಂದು ತಿಳಿಸಿದೆ.
2023–24ನೇ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯು ಶೇ 5.6ರಷ್ಟು ಇತ್ತು. ಇತ್ತೀಚೆಗೆ ಮಂಡನೆಯಾದ ಬಜೆಟ್‌ನಲ್ಲಿ 2024–25ನೇ ಆರ್ಥಿಕ ಸಾಲಿಗೆ ಜಿಡಿಪಿಯ ಶೇ 4.9ರಷ್ಟಕ್ಕೆ ತಗ್ಗಿಸುವ ಗುರಿ ನಿಗದಿಪಡಿಸಲಾಗಿದೆ. ಮೌಲ್ಯದ ಲೆಕ್ಕದಲ್ಲಿ ಇದು ₹16.85 ಲಕ್ಷ ಕೋಟಿ ಆಗಿದೆ.
ಏಪ್ರಿಲ್‌ನಿಂದ ಜೂನ್‌ವರೆಗೆ ₹5.49 ಲಕ್ಷ ಕೋಟಿ ನಿವ್ವಳ ತೆರಿಗೆ ವರಮಾನ ಸಂಗ್ರಹವಾಗಿದೆ. ಇದು ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ ಅಂದಾಜಿನ ಶೇ 21.1ರಷ್ಟಿದೆ. 2022–23ರ ಜೂನ್ ಅಂತ್ಯಕ್ಕೆ ಶೇ 18.6ರಷ್ಟು ವರಮಾನ ಸಂಗ್ರಹವಾಗಿತ್ತು.
ಜೂನ್ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರದ ಒಟ್ಟು ವೆಚ್ಚವು ₹9.69 ಲಕ್ಷ ಕೋಟಿ ಆಗಿದೆ. ಇದು ಬಜೆಟ್ ಅಂದಾಜಿನ ಶೇ 20.4ರಷ್ಟಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ಸರ್ಕಾರದ ವೆಚ್ಚವು ಶೇ 23ರಷ್ಟು ದಾಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.