ನವದೆಹಲಿ: ಐದು ವರ್ಷಗಳ ಸೇವಾವಧಿ ಪೂರ್ಣಗೊಳ್ಳುವ ಮೊದಲು ಸಾವು ಅಥವಾ ಅಂಗವೈಕಲ್ಯಕ್ಕೆ ಒಳಗಾಗುವ ಪ್ರಕರಣಗಳಲ್ಲೂ ಕಾರ್ಮಿಕರಿಗೆ ಗ್ರಾಚ್ಯುಯಿಟಿ ಸೌಲಭ್ಯ ದೊರೆಯುವ ಸಂಭವವಿದೆ. ಪ್ರಸ್ತುತ, ಗ್ರಾಚ್ಯುಯಿಟಿ ಸವಲತ್ತು ಪಡೆಯಲು ಐದು ವರ್ಷ ಸೇವೆ ಸಲ್ಲಿಸಿರಬೇಕು.
ಈ ಸಂಬಂಧ ಕಾರ್ಮಿಕ ಇಲಾಖೆ ಕರಡು ನೀತಿ ರೂಪಿಸಿದ್ದು ಅಕ್ಟೋಬರ್ 25ರೊಳಗೆ ಅಭಿಪ್ರಾಯ, ಸಲಹೆ ನೀಡಲು ಕೋರಿದೆ. ಐದು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಗುತ್ತಿಗೆ ಆಧಾರದಲ್ಲಿ ನಿಶ್ಚಿತ ಅವಧಿಗೆ ಕೆಲಸ ಮಾಡುವ ಸಿಬ್ಬಂದಿಯನ್ನೂ ಗ್ಯಾಚ್ಯುಯಿಟಿ ಸೌಲಭ್ಯದ ವ್ಯಾಪ್ತಿಗೆ ಒಳಪಡಿಸಲು ಚಿಂತನೆ ನಡೆಸಿದೆ.
ಕರಡು ನೀತಿಯ ಅನುಸಾರ, ಐದು ವರ್ಷಗಳ ಸೇವಾವಧಿ ಪೂರ್ಣವಾಗಿರಬೇಕು ಎಂದೇನೂ ಇಲ್ಲ. ಅಕಾಲಿಕ ಸಾವು, ಅಂಗವೈಕಲ್ಯದ ಸಂದರ್ಭದಲ್ಲಿ ನಿಶ್ಚಿತ ಅವಧಿ ಮುಗಿಯದಿದ್ದರೂ ಈ ಸೌಲಭ್ಯ ದೊರೆಯಲಿದೆ.
ಒಂದು ವೇಳೆ ಸಾವು ಸಂಭವಿಸಿದರೆ ಗ್ರಾಚ್ಯುಯಿಟಿಯ ಮೊತ್ತವನ್ನು ನಾಮನಿರ್ದೇಶನ ವ್ಯಕ್ತಿಗೆ, ನಾಮನಿರ್ದೇಶನ ಇಲ್ಲದಿದ್ದಲ್ಲಿ ಉತ್ತರಾಧಿಕಾರಿಗಳಿಗೆ ಪಾವತಿಸಬೇಕು. ನಾಮನಿರ್ದೇಶನಗೊಂಡವರು, ಉತ್ತರಾಧಿಕಾರಿಗಳು ಬಾಲಕ/ಬಾಲಕಿ ಆಗಿದ್ದರೆ ವಯಸ್ಕರಾಗುವವರೆಗೂ ಮೊತ್ತವನ್ನು ಠೇವಣಿ ಇಡಬೇಕು ಎಂದು ಉಲ್ಲೇಖಿಸಲಾಗಿದೆ.
ಅಂಗವೈಕಲ್ಯ ಸಂದರ್ಭದಲ್ಲಿ ಇಳಿಸಲಾದ ವೇತನದಲ್ಲಿ ನೇಮಕಾತಿ ಮುಂದುವರಿದರೆ ಗ್ರಾಚ್ಯುಯಿಟಿ ಮೊತ್ತವನ್ನು ಎರಡೂ ಸಂದರ್ಭದಲ್ಲಿ ಪಡೆದ ವೇತನದ ಮೊತ್ತವನ್ನು ಆಧರಿಸಿ ಲೆಕ್ಕ ಹಾಕಬೇಕು. ಈ ಯೋಜನೆಯಡಿ ಗ್ರಾಚ್ಯುಯಿಟಿ ಸೌಲಭ್ಯ ಪಡೆಯಲಿರುವ ನೌಕರರು ಆಧಾರ್ ಸಂಖ್ಯೆ ದಾಖಲೆಯನ್ನು ಹಾಜರುಪಡಿಸಬೇಕು ಎಂದು ತಿಳಿಸಲಾಗಿದೆ.
ಸಿಬ್ಬಂದಿ ಪರಿಹಾರ ಕಾಯ್ದೆ 1923, ಕಾರ್ಮಿಕರ ರಾಜ್ಯ ವಿಮಾ ಕಾಯ್ದೆ 1848, ಕಾರ್ಮಿಕ ಭವಿಷ್ಯ ನಿಧಿ ಮತ್ತು ಇತರೆ ಸೌಲಭ್ಯಗಳ ಕಾಯ್ದೆ 1952, ಹೆರಿಗೆ ಸೌಲಭ್ಯ ಕಾಯ್ದೆ 1961 ಮತ್ತು ಗ್ರಾಚ್ಯುಯಿಟಿ ಪಾವತಿ ಕಾಯ್ದೆ 1971 ನಿಯಮಗಳನ್ನು ಒಗ್ಗೂಡಿಸಬೇಕು ಎಂದು ಕರಡುನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.