ನವದೆಹಲಿ: ವಸ್ತುಗಳನ್ನು ಬುಕ್ ಮಾಡಿ ಕೇವಲ 90 ನಿಮಿಷಗಳಲ್ಲೇ ಮನೆ ಬಾಗಿಲಿಗೆ ತಲುಪಿಸುವ ಸ್ಥಳೀಯ ಪೂರೈಕೆ ಸೇವೆಗೆ ಫ್ಲಿಪ್‌ಕಾರ್ಟ್ ಚಾಲನೆ ನೀಡಿದೆ. ಮೊಬೈಲ್ ಫೋನ್‌ಗಳು, ದಿನಸಿ, ತರಕಾರಿ, ಮಾಂಸ ಹಾಗೂ ಹಣ್ಣುಗಳನ್ನು ಅತಿ ಕಡಿಮೆ ಸಮಯದಲ್ಲಿ ಡೆಲಿವರಿ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ.
ಆರಂಭದಲ್ಲಿ ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ 'ಫ್ಲಿಪ್‌ಕಾರ್ಟ್ ಕ್ವಿಕ್' ಸೇವೆ ಒದಗಿಸಲಾಗುತ್ತಿದೆ. ವರ್ಷದ ಅಂತ್ಯದೊಳಗೆ ದೇಶದ ಆರು ಮಹಾನಗರಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುತ್ತದೆ ಎಂದು ಫ್ಲಿಪ್‌ಕಾರ್ಟ್ ಉಪಾಧ್ಯಕ್ಷ ಸಂದೀಪ್ ಕಾರ್ವಾ ಹೇಳಿದ್ದಾರೆ.
ಡೆಲಿವರಿ ಸೇವೆಗಳನ್ನು ವಿಸ್ತರಿಸಲು ಫ್ಲಿಪ್‌ಕಾರ್ಟ್ ನಿಂಜಾಕಾರ್ಟ್ ಹಾಗೂ ಶ್ಯಾಡೊಫ್ಯಾಕ್ಸ್ ಕಂಪನಿಗಳೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. 'ಇಂದು ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್ ಕ್ವಿಕ್ ಸೇವೆಗೆ ಚಾಲನೆ ನೀಡಿದ್ದೇವೆ. ನಮ್ಮ ಪಾಲುದಾರ ಶ್ಯಾಡೊಫ್ಯಾಕ್ಸ್ ವಸ್ತುಗಳನ್ನು 90 ನಿಮಿಷಗಳಲ್ಲಿ ಡೆಲಿವರಿ ಮಾಡುತ್ತದೆ. ಫ್ಲಿಪ್‌ಕಾರ್ಟ್‌ನ ಇಕಾರ್ಟ್ ಸಹ ಸೇವೆ ಮುಂದುವರಿಸಲಿದೆ' ಎಂದಿದ್ದಾರೆ.
ದಿನಸಿ ಪದಾರ್ಥಗಳು, ಡೈರಿ ಉತ್ಪನ್ನಗಳು, ಮಾಂಸ, ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ಸ್ ಸಾಧನಗಳು, ಗೃಹ ಬಳಕೆ ಹಾಗೂ ಲೇಖನ ಸಾಮಗ್ರಿಗಳು ಸೇರಿದಂತೆ 2,000ಕ್ಕೂ ಹೆಚ್ಚು ವಸ್ತುಗಳಿಗೆ ಫ್ಲಿಪ್‌ಕಾರ್ಟ್ ಕ್ವಿಕ್ ಆಯ್ಕೆ ಸಿಗುತ್ತಿದೆ. ಗ್ರಾಹಕರು ಮುಂದಿನ 90 ನಿಮಿಷಗಳಲ್ಲಿ ಡೆಲಿವರಿ ಅಥವಾ 2 ಗಂಟೆಗಳ ಡೆಲಿವರಿ ಆಯ್ಕೆಗಳನ್ನು ಆಯ್ದುಕೊಳ್ಳಬಹುದು. ಬೆಳಿಗ್ಗೆ 6ರಿಂದ ಮಧ್ಯಾರಾತ್ರಿ ವರೆಗೂ ಡೆಲಿವರಿ ನಡೆಯಲಿದ್ದು, ಪೂರೈಕೆ ಕನಿಷ್ಠ ಶುಲ್ಕ ₹29 ಇರಲಿದೆ.
ಪ್ರಸ್ತುತ ಬೆಂಗಳೂರಿನ ಬನಶಂಕರಿ, ವೈಟ್‌ಫೀಲ್ಡ್, ಎಚ್‌ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್, ಕೆ.ಆರ್.ಪುರಂ ಹಾಗೂ ಇಂದಿರಾನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಫ್ಲಿಪ್‌ಕಾರ್ಟ್ ಕ್ವಿಕ್ ಸೇವೆ ಲಭ್ಯವಾಗಿದೆ.
ಕೋವಿಡ್–19 ಸಾಂಕ್ರಾಮಿಕದ ನಡುವೆ ಆನ್‌ಲೈನ್ ಮೂಲಕ ನಿತ್ಯ ಬಳಕೆ ವಸ್ತುಗಳು ಹಾಗೂ ದಿನಸಿ ತರಿಸಿಕೊಳ್ಳುವ ಪ್ರಕ್ರಿಯೆ ಹೆಚ್ಚಿದೆ. ರಿಲಯನ್ಸ್ 'ಜಿಯೊಮಾರ್ಟ್' ಮೂಲಕ ಈ ವಲಯ ಪ್ರವೇಶಿಸಿದ್ದು, ಪೈಪೋಟಿ ಮತ್ತಷ್ಟು ಹೆಚ್ಚಳವಾಗಿದೆ. ಕಿರಾಣಿ ಅಂಗಡಿಗಳು, ಸಣ್ಣ ವ್ಯಾಪಾರಿಗಳು ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳತ್ತ ಮುಖ ಮಾಡಿದ್ದಾರೆ. ಕಳೆದ ಕೆಲವು ತಿಂಗಳಿಂದ ಫ್ಲಿಪ್‌ಕಾರ್ಟ್ ರಿಟೇಲ್ ಸಂಪರ್ಕ ಜಾಲವಾದ ಸ್ಪೆನ್ಸರ್ಸ್ ಮತ್ತು ವಿಶಾಲ್ ಮೆಗಾ ಮಾರ್ಟ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ದಿನಸಿ ಸಾಮಗ್ರಿ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಸ್ಥಳೀಯ ಡೆಲಿವರಿಗೆ ಪೂರಕವಾಗಲಿದೆ.
ಗೋಲ್ಡ್‌ಮ್ಯಾನ್ ಸ್ಯಾಕ್ಸ್ ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ ಇ–ಕಾಮರ್ಸ್ ಉದ್ಯಮವು ವಾರ್ಷಿಕ ಶೇ 27ರಷ್ಟು (ಸಿಎಜಿಆರ್) ವೃದ್ಧಿಯಾಗಲಿದೆ. ದಿನಸಿ ಹಾಗೂ ವಸ್ತ್ರಗಳು ಬೆಳವಣಿಗೆಯಲ್ಲಿ ಪ್ರಮುಖ ಇಂಧನವಾಗಲಿದ್ದು, 2024ರ ವೇಳೆಗೆ ದೇಶದ ಇ–ಕಾಮರ್ಸ್ ಕ್ಷೇತ್ರ 99 ಬಿಲಿಯನ್ ಡಾಲರ್ ತಲುಪುವುದಾಗಿ ನಿರೀಕ್ಷಿಸಲಾಗಿದೆ.
2019ರಲ್ಲಿ ಆನ್‌ಲೈನ್ ಮೂಲಕ ದಿನಸಿ ಪೂರೈಕೆ ಸೇವೆಯ ಶೇ 80ಕ್ಕಿಂತ ಹೆಚ್ಚು ಪಾಲನ್ನು ಬಿಗ್‌ಬ್ಯಾಸ್ಕೆಟ್ ಹಾಗೂ ಗ್ರೂಫರ್ಸ್ ಹೊಂದಿದ್ದವು. ಆದರೆ, ರಿಲಯನ್ಸ್ ಇಂಡಸ್ಟ್ರೀಸ್ ಆನ್‌ಲೈನ್ ದಿನಸಿ ಮಾರಾಟ ಮಾರುಕಟ್ಟೆಯ ಅರ್ಧದಷ್ಟು ವ್ಯಾಪಿಸಿಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ರಿಲಯನ್ಸ್‌ನ ಇ–ಕಾಮರ್ಸ್ ವೇದಿಕೆ ಜಿಯೊಮಾರ್ಟ್, ಫೇಸ್‌ಬುಕ್‌ನ ವಾಟ್ಸ್‌ಆ್ಯಪ್ ಬಳಸಿಕೊಂಡು ಸ್ಥಳೀಯ ಕಿರಾಣಿ ಅಂಗಳು ಮತ್ತು ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಯೋಜನೆ ರೂಪಿಸಿದೆ.
ಫ್ಲಿಪ್‌ಕಾರ್ಟ್ ಸೇರಿದಂತೆ ಹಲವು ಕಂಪನಿಗಳು 90 ನಿಮಿಷಗಳಲ್ಲಿ ಡೆಲಿವರಿ ನೀಡುವ ಮಾದರಿಗಳು ಈ ಹಿಂದೆಯೂ ಅನುಸರಿಸಿವೆ, ಆದರೆ ಅದನ್ನು ವಿಸ್ತರಿಸಲು ಸಾಧ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.