ADVERTISEMENT

ಐ.ಟಿ. ಪೋರ್ಟಲ್: ವಿವರ ಪಡೆದ ನಿರ್ಮಲಾ ಸೀತಾರಾಮನ್

ಪಿಟಿಐ
Published 23 ಆಗಸ್ಟ್ 2021, 14:48 IST
Last Updated 23 ಆಗಸ್ಟ್ 2021, 14:48 IST
ಸಲೀಲ್ ಪಾರೇಖ್
ಸಲೀಲ್ ಪಾರೇಖ್   

ನವದೆಹಲಿ: ದೇಶದ ಹೊಸ ಐ.ಟಿ. ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆಗಳು ಮುಂದುವರಿದಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಫೊಸಿಸ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸಲೀಲ್ ಪಾರೇಖ್ ಅವರಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಪೋರ್ಟಲ್‌ಅನ್ನು ಇನ್ಫೊಸಿಸ್‌ ಅಭಿವೃದ್ಧಿಪಡಿಸಿದೆ.

ಪಾರೇಖ್ ಅವರು ನಿರ್ಮಲಾ ಅವರನ್ನು ಸೋಮವಾರ ಭೇಟಿ ಮಾಡಿದರು. ಪೋರ್ಟಲ್‌ನಲ್ಲಿನ ತಾಂತ್ರಿಕ ತೊಂದರೆಗಳ ಬಗ್ಗೆ ಸಚಿವರಿಗೆ ಖುದ್ದಾಗಿ ವಿವರ ನೀಡಬೇಕು ಎಂದು ಪಾರೇಖ್ ಅವರಿಗೆ ತಿಳಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಭಾನುವಾರ ಮಾಹಿತಿ ನೀಡಿತ್ತು. ಪೋರ್ಟಲ್‌ ಚಾಲನೆ ಪಡೆದು ಎರಡೂವರೆ ತಿಂಗಳು ಕಳೆದಿದ್ದರೂ, ತಾಂತ್ರಿಕ ತೊಂದರೆಗಳನ್ನು ಬಗೆಹರಿಸದೆ ಇರುವುದಕ್ಕೆ ಕಾರಣ ಏನು ಎಂಬುದಕ್ಕೆ ನಿರ್ಮಲಾ ಅವರು ವಿವರಣೆ ಕೇಳಿದರು ಎಂದು ಮೂಲಗಳು ತಿಳಿಸಿವೆ.

ಸಮಸ್ಯೆಗಳನ್ನು ಹೇಗೆ ಸರಿಪಡಿಸಲಾಗುತ್ತದೆ ಎಂಬುದನ್ನು ಪಾರೇಖ್ ಮತ್ತು ಅವರ ತಂಡವು ಸಚಿವರಿಗೆ ವಿವರಿಸಿದೆ ಎಂದು ಗೊತ್ತಾಗಿದೆ. ಪೋರ್ಟಲ್‌ಅನ್ನು ಜೂನ್‌ 7ರಂದು ಬಳಕೆಗೆ ಮುಕ್ತವಾಗಿಸಲಾಗಿದೆ. ಆಗಸ್ಟ್‌ 21 ಹಾಗೂ 22ರಂದು ಪೋರ್ಟಲ್‌ ಬಳಕೆಗೆ ಲಭ್ಯವಿರಲಿಲ್ಲ. ಆ. 22ರ ರಾತ್ರಿಯ ಹೊತ್ತಿಗೆ ಪೋರ್ಟಲ್‌ ಮತ್ತೆ ಸೇವೆಗೆ ಲಭ್ಯವಾಯಿತು.

ADVERTISEMENT

ಪೋರ್ಟಲ್‌ನಲ್ಲಿನ ಸಮಸ್ಯೆಗಳ ವಿಚಾರವಾಗಿ ನಿರ್ಮಲಾ ಅವರು ಇನ್ಫೊಸಿಸ್‌ನ ತಂಡವನ್ನು ಭೇಟಿ ಆಗುತ್ತಿರುವುದು ಇದು ಎರಡನೆಯ ಬಾರಿ. ಸಚಿವರು ಜೂನ್‌ 22ರಂದು ಪಾರೇಖ್ ಮತ್ತು ಇನ್ಫೊಸಿಸ್‌ ಸಿಒಒ ಪ್ರವೀಣ್ ರಾವ್ ಅವರನ್ನು ಭೇಟಿ ಮಾಡಿದ್ದರು.

ಹೊಸ ಪೋರ್ಟಲ್‌ ಅಭಿವೃದ್ಧಿಪಡಿಸಲು ಇನ್ಫೊಸಿಸ್‌ಗೆ 2019ರಲ್ಲಿ ಗುತ್ತಿಗೆ ನೀಡಲಾಯಿತು. ಐ.ಟಿ. ವಿವರಗಳನ್ನು ಪರಿಶೀಲಿಸಲು ತೆಗೆದುಕೊಳ್ಳುವ ಸಮಯವನ್ನು 63 ದಿನಗಳಿಂದ ಒಂದು ದಿನಕ್ಕೆ ಇಳಿಸುವ ಉದ್ದೇಶ ಕೂಡ ಹೊಸ ಪೋರ್ಟಲ್‌ ಅಭಿವೃದ್ಧಿಪಡಿಸುವುದರ ಹಿಂದೆ ಇತ್ತು. ಆದರೆ ಹೊಸ ಪೋರ್ಟಲ್‌ ಶುರುವಾದ ದಿನದಿಂದಲೂ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.