ಮುಂಬೈ: ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತಿದೆ. ಹಾಗಾಗಿ, ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳಲು ಸವಾಲಾಗಿ ಪರಿಣಮಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಸಿಕ ವರದಿ ಹೇಳಿದೆ.
ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ನಿಂದ ಇಳಿಕೆಯಾಗುತ್ತಿದೆ. ಫೆಭ್ರುವರಿಯಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ 5.09ಕ್ಕೆ ಇಳಿಕೆಯಾಗಿದೆ.
‘ಹಣದುಬ್ಬರವು ನಿಧಾನಗತಿಯಲ್ಲಿ ಇಳಿಕೆಯ ಹಾದಿಯಲ್ಲಿ ಸಾಗುತ್ತಿದೆ. ಆದರೆ, ಆಹಾರ ಪದಾರ್ಥಗಳ ಧಾರಣೆಯಲ್ಲಿ ಏರಿಕೆಯಾಗುತ್ತಿದೆ. ಇದು ಆರ್‌ಬಿಐನ ನಿಗದಿತ ಗುರಿ ಸಾಧನೆಗೆ ಅಡ್ಡಿಯಾಗಿದೆ’ ಎಂದು ‘ಭಾರತದ ಆರ್ಥಿಕತೆ’ ಶೀರ್ಷಿಕೆಯಡಿ ಮಂಗಳವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ.
ಕೆಲವು ಪ್ರಮುಖ ದೇಶಗಳ ಆರ್ಥಿಕತೆಯ ಚೇತರಿಕೆ ಮಂದಗತಿಯಲ್ಲಿದೆ. ಇದು ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ.
2023–24ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಹೆಚ್ಚಳವಾಗಿದೆ. ಕಾರ್ಪೊರೇಟ್ ಹಾಗೂ ಬ್ಯಾಂಕಿಂಗ್ ವಲಯದ ಬೆಳವಣಿಗೆ ಸದೃಢವಾಗಿದೆ. ಇದು ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.