ನವದೆಹಲಿ: ಜುಲೈನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಮಿತಿಯಲ್ಲಿ ಇದ್ದ ಚಿಲ್ಲರೆ ಹಣದುಬ್ಬರ ಪ್ರಮಾಣವು ಸೆಪ್ಟೆಂಬರ್ ತಿಂಗಳಲ್ಲಿ ಶೇಕಡ 5.49ಕ್ಕೆ ಹೆಚ್ಚಳ ಕಂಡಿದೆ.
ಇದು ಒಂಬತ್ತು ತಿಂಗಳಲ್ಲಿಯೇ ಅತಿಹೆಚ್ಚಿನ ಪ್ರಮಾಣ. ಆಹಾರ ವಸ್ತುಗಳ ಬೆಲೆಯಲ್ಲಿ ಆಗಿರುವ ತೀವ್ರ ಹೆಚ್ಚಳವು ಹಣದುಬ್ಬರ ಪ್ರಮಾಣವು ಏರಿಕೆ ಕಂಡಿರುವುದಕ್ಕೆ ಪ್ರಮುಖ ಕಾರಣ ಎಂಬುದನ್ನು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.
ಚಿಲ್ಲರೆ ಹಣದುಬ್ಬರ ಪ್ರಮಾಣವು ಆಗಸ್ಟ್‌ನಲ್ಲಿ ಶೇ 3.65ರಷ್ಟು ಹಾಗೂ ಜುಲೈನಲ್ಲಿ ಶೇ 3.6ರಷ್ಟು ಇತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಇದು ಶೇ 5.02ರಷ್ಟು ಇತ್ತು.
ಆಗಸ್ಟ್‌ನಲ್ಲಿ ಶೇ 5.66ರಷ್ಟು ಇದ್ದ ಆಹಾರ ವಸ್ತುಗಳ ಹಣದುಬ್ಬರ ಪ್ರಮಾಣವು ಸೆಪ್ಟೆಂಬರ್‌ನಲ್ಲಿ ಶೇ 9.24ಕ್ಕೆ ಏರಿಕೆ ಕಂಡಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಮಟ್ಟಕ್ಕೆ ಹೋಲಿಸಿದರೆ, ಈ ವರ್ಷದ ಸೆಪ್ಟೆಂಬರ್‌ನಲ್ಲಿ ತರಕಾರಿಗಳ ಬೆಲೆಯು ಶೇ 36ರಷ್ಟು ಹೆಚ್ಚಳ ಆಗಿದೆ.
ಹಣ್ಣುಗಳ ಬೆಲೆ ಶೇ 7.65ರಷ್ಟು, ದ್ವಿದಳ ಧಾನ್ಯಗಳ ಬೆಲೆಯು ಶೇ 9.81ರಷ್ಟು ಹಾಗೂ ಏಕದಳ ಧಾನ್ಯಗಳ ಬೆಲೆಯು ಶೇ 6.84ರಷ್ಟು ಹೆಚ್ಚಳ ಕಂಡಿದೆ. ಆಹಾರ ವಸ್ತುಗಳ ಬೆಲೆಯು ಚಿಲ್ಲರೆ ಹಣದುಬ್ಬರ ದರದ ಏರಿಳಿತದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ.
ಹವಾಮಾನ ಪರಿಸ್ಥಿತಿ ಕೂಡ ಹಣದುಬ್ಬರ ಏರಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಹೇಳಿದೆ.
ಹಣದುಬ್ಬರದ ಪ್ರಮಾಣವು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ತೀವ್ರವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿನ ಹಣದುಬ್ಬರ ಪ್ರಮಾಣ ಶೇ 5.87ರಷ್ಟು, ನಗರ ಪ್ರದೇಶಗಳಲ್ಲಿನ ಹಣದುಬ್ಬರ ಶೇ 5.05ರಷ್ಟು ಇತ್ತು.
‘ಆರ್‌ಬಿಐ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಸೆಪ್ಟೆಂಬರ್ ತಿಂಗಳ ಹಣದುಬ್ಬರದ ಪ್ರಮಾಣವು ಹೇಳುತ್ತಿದೆ’ ಎಂದು ಕೋಟಕ್ ಮಹೀಂದ್ರ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಉಪಾಸನಾ ಭಾರದ್ವಾಜ್ ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಹೆಚ್ಚಾಗಿರುವ ಕಾರಣ, ಡಿಸೆಂಬರ್‌ನಲ್ಲಿ ರೆಪೊ ದರ ಇಳಿಕೆಯು ಸಾಧ್ಯತೆಯು ಗಣನೀಯವಾಗಿ ಕಡಿಮೆ ಆಗಿದೆಅದಿತಿ ನಾಯರ್, ಐಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ
ಆಹಾರ ವಸ್ತುಗಳ ಬೆಲೆ ಹೆಚ್ಚಳವು ಸಗಟು ಹಣದುಬ್ಬರದಲ್ಲಿಯೂ ಏರಿಕೆಗೆ ಕಾರಣವಾಗಿದೆ. ಸಗಟು ಹಣದುಬ್ಬರ ಪ್ರಮಾಣವು ಸೆಪ್ಟೆಂಬರ್ ತಿಂಗಳಲ್ಲಿ ಶೇ 1.84ಕ್ಕೆ ಏರಿಕೆ ಆಗಿದೆ. ಆಗಸ್ಟ್‌ನಲ್ಲಿ ಅದು ಶೇ 1.31ರಷ್ಟು ಇತ್ತು. ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ಸಗಟು ಬೆಲೆಯು ಸೆಪ್ಟೆಂಬರ್‌ನಲ್ಲಿ ಕ್ರಮವಾಗಿ ಶೇ 74.5ರಷ್ಟು, ಶೇ 78.8ರಷ್ಟು ಹಾಗೂ 78.1ರಷ್ಟು ಏರಿಕೆ ಕಂಡಿವೆ. ಅಡುಗೆ ಎಣ್ಣೆಗಳ ಸಗಟು ಬೆಲೆ ಏರಿಕೆಯು ಶೇ 10.5ರಷ್ಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.