ಬೆಂಗಳೂರು: ಭಾರತವನ್ನೂ ಒಳಗೊಂಡು ಏಷ್ಯಾದ ಮಾರುಕಟ್ಟೆಗಳಿಂದ ಸೆಪ್ಟೆಂಬರ್‌ನಲ್ಲಿ ₹93,458 ಕೋಟಿ ಬಂಡವಾಳವನ್ನು ವಿದೇಶಿ ಹೂಡಿಕೆದಾರರು ಹಿಂದಕ್ಕೆ ಪಡೆದಿದ್ದಾರೆ.
ಅಮೆರಿಕದಲ್ಲಿ ಬಡ್ಡಿದರವು ದೀರ್ಘಾವಧಿಯವರೆಗೆ ಗರಿಷ್ಠ ಮಟ್ಟದಲ್ಲಿ ಇರುವ ಮತ್ತು ಬಾಂಡ್ ಗಳಿಕೆಯಲ್ಲಿ ಆಗುತ್ತಿರುವ ಏರಿಕೆಯೇ ಬಂಡವಾಳ ಹೊರಹರಿವಿಗೆ ಕಾರಣವಾಗಿದೆ.
ಭಾರತ, ತೈವಾನ್, ದಕ್ಷಿಣ ಕೊರಿಯಾ, ಇಂಡೊನೇಷ್ಯಾ, ಪಿಲಿಫೀನ್ಸ್, ಥಾಯ್ಲೆಂಡ್ ಮತ್ತು ವಿಯೆಟ್ನಾಂ ಮಾರುಕಟ್ಟೆಗಳಲ್ಲಿನ ಮಾಹಿತಿಯ ಪ್ರಕಾರ, ವಿದೇಶಿ ಹೂಡಿಕೆದಾರರು ಸೆಪ್ಟೆಂಬರ್‌ನಲ್ಲಿ ₹93,458 ಕೋಟಿಯಷ್ಟು ಬಂಡವಾಳವನ್ನು ಹಿಂದಕ್ಕೆ ಪಡೆದಿದ್ದಾರೆ. 2022ರ ಜೂನ್ ತಿಂಗಳ ಬಳಿಕ ಇದೇ ಮೊದಲಿಗೆ ಈ ಪ್ರಮಾಣದಲ್ಲಿ ಬಂಡವಾಳ ಹೊರಹರಿವು ಆಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಕಳೆದ ತಿಂಗಳು ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ವರ್ಷಾಂತ್ಯದ ವೇಳೆಗೆ ಏರಿಕೆ ಆಗುವ ಅಂದಾಜು ಮಾಡಲಾಗಿದೆ. ಹಣದುಬ್ಬರದ ಒತ್ತಡವನ್ನು ತಗ್ಗಿಸಲು 2024ರಲ್ಲಿಯೂ ಬಿಗಿಯಾದ ಹಣಕಾಸು ನೀತಿ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಫೆಡರಲ್ ರಿಸರ್ವ್ ಹೇಳಿದೆ. ಅಮೆರಿಕದ 10 ವರ್ಷಗಳ ಬಾಂಡ್ ಗಳಿಕೆಯು ಕಳೆದ ತಿಂಗಳು ಶೇ 4.68ಕ್ಕೆ ಏರಿಕೆ ಕಾಣುವ ಮೂಲಕ 16 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ.
ಅಮೆರಿಕದಲ್ಲಿ ಬಡ್ಡಿದರ ಏರಿಕೆಯು ಈಕ್ವಿಟಿ ಗಳಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್‌ನ ಏಷ್ಯಾ ಪೆಸಿಫಿಕ್‌ನ ಈಕ್ವಿಟಿ ತಜ್ಞ ಟಿಮೋಟಿ ಮೋ ಹೇಳಿದ್ದಾರೆ. Timothy Moe
ವಿದೇಶಿ ಹೂಡಿಕೆದಾರರು ಭಾರತದ ಮಾರುಕಟ್ಟೆಯಿಂದ ಸೆಪ್ಟೆಂಬರ್‌ನಲ್ಲಿ ₹14,774 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಈ ಮೂಲಕ ಏಳು ತಿಂಗಳಿನಲ್ಲಿ ಮೊದಲ ಬಾರಿಗೆ ಮಾರಾಟ ಬಂಡವಾಳ ಹಿಂತೆಗೆದ ಕಂಡುಬಂದಿತು. ತೈವಾನ್ ಮಾರುಕಟ್ಟೆಯಿಂದಲೂ ₹52,041 ಕೋಟಿ ಬಂಡವಾಳ ಹಿಂದಕ್ಕೆ ಪಡೆಯಲಾಗಿದೆ. 2022ರ ಜೂನ್ ಬಳಿಕ ದೊಡ್ಡ ಪ್ರಮಾಣದ ಹೊರಹರಿವು ಇದಾಗಿದೆ.
ಮಧ್ಯಪ್ರಾಚ್ಯ ಬಿಕ್ಕಟ್ಟು ಜಾಗತಿಕ ಕಚ್ಚಾ ತೈಲ ದರ ಏರಿಕೆಗೆ ಕಾರಣವಾಗಬಹುದು. ಹೀಗಾದಲ್ಲಿ ಅಲ್ಪಾವಧಿಯಲ್ಲಿ ಹೂಡಿಕೆ ಚಟುವಟಿಕೆ ಮೆಲೆ ಪರಿಣಾಮ ಉಂಟಾಗಲಿದೆ ಎಂದು ಎಎನ್‌ಜೆಡ್ ಬ್ಯಾಂಕ್‌ನ ಏಷ್ಯಾ ಸಂಶೋಧನೆಯ ಮುಖ್ಯಸ್ಥ ಕೂಂಗ್ ಗೊ ಹೇಳಿದ್ದಾರೆ. Khoon Goh
ಭಾರತ, ತೈವಾನ್‌ನಿಂದ ಹೆಚ್ಚಿನ ಬಂಡವಾಳ ಹೊರಹರಿವು ಹೂಡಿಕೆ ಮೇಲೆ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮ ಸಂಭವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.