ಶ್ರೀ ಪೆರಂಬದೂರು: ಐಫೋನ್ ತಯಾರಿಕಾ ಕಂಪನಿ ಫಾಕ್ಸ್‌ಕಾನ್‌ನ ವಹಿವಾಟು ಭಾರತದಲ್ಲಿ ಇಲ್ಲಿಯವರೆಗೆ 1,000 ಕೋಟಿ ಡಾಲರ್ (ಸುಮಾರು ₹84,000 ಕೋಟಿ) ದಾಟಿದ್ದು, ಕಂಪನಿಯು ಇದುವರೆಗೆ ದೇಶದಲ್ಲಿ 140 ಕೋಟಿ ಡಾಲರ್ ( ₹11,742 ಕೋಟಿ) ಹೂಡಿಕೆ ಮಾಡಿದೆ ಎಂದು ಕಂಪನಿಯ ಮುಖ್ಯಸ್ಥ ಯಂಗ್ ಲಿಯು ಹೇಳಿದ್ದಾರೆ.
ಇಲ್ಲಿನ ಫಾಕ್ಸ್‌ಕಾನ್ ಘಟಕದ ಬಳಿ ಇರುವ ಮಹಿಳೆಯರ ವಸತಿ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ವಹಿವಾಟನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡು, ಕರ್ನಾಟಕ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳನ್ನು ಈಗಾಗಲೇ ಭೇಟಿಯಾಗಿರುವೆ. ಭಾರತದ ಬೆಳವಣಿಗೆಯೊಂದಿಗೆ ಒಟ್ಟಿಗೆ ಬೆಳೆಯುತ್ತೇವೆ ಎಂದು ಹೇಳಿದರು.
ಫಾಕ್ಸ್‌ಕಾನ್ ಘಟಕದಲ್ಲಿ ಲಿಂಗ ಭೇದವಿಲ್ಲದೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ವಿವಾಹಿತೆಯರು ಕಂಪನಿಯ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಭಾರತದಲ್ಲಿ ಕಂಪನಿಯ ಒಟ್ಟು 48 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ ಎಂದರು.
ಬಿಇಎಸ್‌ಎಸ್ ಸ್ಥಾಪನೆಗೆ ಚಿಂತನೆ: ಭಾರತದಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಘಟಕವನ್ನು ಸ್ಥಾಪಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಯಂಗ್ ಲಿಯು ಹೇಳಿದ್ದಾರೆ.
ವಿದ್ಯುತ್ ಚಾಲಿತ ವಾಹನ ವಿಭಾಗದಲ್ಲಿ ಬ್ಯಾಟರಿ ತಯಾರಿಕಾ ವಹಿವಾಟನ್ನು ವಿಸ್ತರಣೆ ಮಾಡಲು ಯೋಜಿಸಿದ್ದು, ಈಗಾಗಲೇ ತೈವಾನ್‌ನಲ್ಲಿ ಮೊದಲ ಘಟಕವನ್ನು ಸ್ಥಾಪಿಸಲಾಗಿದೆ. ಫಾಕ್ಸ್‌ಕಾನ್‌ನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ವಿಭಾಗವು ಇದೀಗ ಭಾರತದಲ್ಲಿ ಆರಂಭಗೊಂಡಿದೆ ಎಂದು ತಿಳಿಸಿದರು.
ತಮಿಳುನಾಡಿನಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (ಬಿಇಎಸ್‌ಎಸ್) ಕುರಿತು ಇಲ್ಲಿನ ಕೈಗಾರಿಕಾ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಲಿಯು ಹೇಳಿದ್ದಾರೆ.
ಫಾಕ್ಸ್‌ಕಾನ್ ಬ್ಯಾಟರಿ ಎನರ್ಜಿ ಸ್ಟೋರೇಜ್ ವಹಿವಾಟು ವಿದ್ಯುತ್ ಚಾಲಿತ ವಾಹನಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರಶಕ್ತಿ ಮತ್ತು ಪವನಶಕ್ತಿಯಿಂದ ಬಿಇಎಸ್‌ಎಸ್ ವಿದ್ಯುತ್ ಅನ್ನು ದಾಸ್ತಾನು ಮಾಡಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.