ADVERTISEMENT

El Nino: ಸಾಂಸ್ಥಿಕ ಹೂಡಿಕೆಗೆ ಅಡ್ಡಿ?

ಮುಂಗಾರು ಕೊರತೆಯಾದರೆ ತಗ್ಗಲಿದೆ ಕೃಷಿ ಉತ್ಪಾದನೆ

ವಿಶ್ವನಾಥ ಎಸ್.
Published 17 ಜೂನ್ 2023, 23:53 IST
Last Updated 17 ಜೂನ್ 2023, 23:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಂಗಾರಿನ ಮೇಲೆ ಎಲ್‌ನಿನೊ ಪರಿಣಾಮ ಬೀರುವ ಆತಂಕ ಎದುರಾಗಿದೆ. ಹೀಗಾದಲ್ಲಿ ಮುಂದಿನ ದಿನಗಳಲ್ಲಿ ಷೇರುಪೇಟೆಗಳಲ್ಲಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

ಮುಂಗಾರಿನ ಮೇಲೆ ಎಲ್‌ನಿನೊ (ಪೆಸಿಫಿಕ್‌ ಸಾಗರದ ಮೇಲ್ಮೈಯಲ್ಲಿನ ತಾಪಮಾನದಲ್ಲಿ ಆಗುವ ಬದಲಾವಣೆ) ಪರಿಣಾಮ ಬೀರುವ ಆತಂಕ ಎದುರಾಗಿದೆ. ಇದು ಮುಂಗಾರಿನ ಆರಂಭದ ದಿನಗಳಷ್ಟೇ. ಮುಂಬರುವ ವಾರಗಳಲ್ಲಿ ಮತ್ತು ತಿಂಗಳುಗಳಲ್ಲಿ ಮಳೆ ಕೊರತೆ ಸರಿಹೋಗಬಹುದು. ಆದರೆ, ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) 36 ವಿಭಾಗಗಳ ಪೈಕಿ 29 ವಿಭಾಗಗಳು ಮುಂಗಾರು ಕಡಿಮೆಯಾಗುವ ಆತಂಕ ವ್ಯಕ್ತಪಡಿಸಿವೆ. ಹಾಗಾದಲ್ಲಿ ಕೃಷಿ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಹಣದುಬ್ಬರಕ್ಕೆ ಕಾರಣವಾಗಲಿದೆ. ಅದರಿಂದಾಗಿ ಬಂಡವಾಳ ಹಿಂತೆಗೆತ ಕಂಡುಬರಲಿದೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಎಲ್‌ನಿನೊದ ಪರಿಣಾಮವು ಸೆಪ್ಟೆಂಬರ್‌ ವೇಳೆಗೆ ಸ್ಪಷ್ಟವಾಗಲಿದ್ದು, ಅಲ್ಲಿಯವರೆಗೂ ಷೇರುಪೇಟೆಯಲ್ಲಿ ಅನಿಶ್ಚಿತತೆ ಇರಲಿದೆ. ಕೃಷಿ, ಎಫ್‌ಎಂಸಿಜಿ ಮತ್ತು ಉಪಭೋಗ ವಲಯಗಳು ಹೆಚ್ಚಿನ ಪರಿಣಾಮ ಎದುರಿಸಲಿವೆ. ದೀರ್ಘಾವಧಿಯ ಹೂಡಿಕೆ ಮಾಡುವವರಿಗೆ ಅಸ್ಥಿರ ವಹಿವಾಟಿನ ಅವಧಿಯಲ್ಲಿ ಷೇರುಗಳನ್ನು ಖರೀದಿಸಿ ಇಟ್ಟುಕೊಳ್ಳುವುದು ಉತ್ತಮ ನಡೆಯಾಗಲಿದೆ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ವಿಶ್ಲೇಷಕ ವಿನ್ಸಂಟ್‌ ಕೆ.ಎ. ಸಲಹೆ ನೀಡಿದ್ದಾರೆ.

ADVERTISEMENT

ಎಫ್‌ಪಿಐ ಒಳಹರಿವು:

ಜೂನ್‌ನಲ್ಲಿಯೂ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ದೇಶದ ಷೇರುಪೇಟೆಗಳಲ್ಲಿ ಖರೀದಿಯನ್ನು ಮುಂದುವರಿಸಿದ್ದಾರೆ. ಜೂನ್‌ 16ರವರೆಗಿನ ಒಟ್ಟು ₹16,405 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಮೇ ತಿಂಗಳಿನಲ್ಲಿ ದಾಖಲೆಯ ₹43,838 ಕೋಟಿ ಹೂಡಿಕೆ ಮಾಡಿದ್ದರು. ಭಾರತದ ಆರ್ಥಿಕತೆ ಮತ್ತು ಕಾರ್ಪೊರೇಟ್‌ ಗಳಿಕೆಯ ಕುರಿತು ವಿದೇಶಿ ಹೂಡಿಕೆದಾರರು ಹೊಂದಿರುವ ವಿಶ್ವಾಸವನ್ನು ಈ ಹೂಡಿಕೆಯು ಸೂಚಿಸುತ್ತಿದೆ ಎಂದು ವಿಜಯಕುಮಾರ್‌ ತಿಳಿಸಿದರು.

ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳಲ್ಲಿ ಭಾರತವು ಉತ್ತಮ ಬೆಳವಣಿಗೆ ಮತ್ತು ಗಳಿಕೆ ಕಂಡುಕೊಳ್ಳುತ್ತಿದೆ ಎನ್ನುವ ಅಭಿಪ್ರಾಯವನ್ನು ವಿದೇಶಿ ಹೂಡಿಕೆದಾರರ ಸಮುದಾಯವು ಹೊಂದಿದೆ. ಭಾರತದ ಈ ಸಾಮರ್ಥ್ಯದ ಲಾಭವನ್ನು ಪಡೆದುಕೊಳ್ಳಲು ಹೂಡಿಕೆ ಮಾಡುತ್ತಿದ್ದಾರೆ. ಹಣಕಾಸು, ವಾಹನ ಮತ್ತು ವಾಹನ ಬಿಡಿಭಾಗಗಳು, ಬಂಡವಾಳ ಸರಕುಗಳು ಮತ್ತು ನಿರ್ಮಾಣ ವಲಯದ ಷೇರುಗಳಲ್ಲಿ ಹೆಚ್ಚಿನ ಬಂಡವಾಳ ತೊಡಗಿಸುತ್ತಿದ್ದಾರೆ. ಐ.ಟಿ., ಲೋಹ, ವಿದ್ಯುತ್ ಮತ್ತು ಜವಳಿ ವಲಯಗಳಿಂದ ಬಂಡವಾಳ ಹಿಂದಕ್ಕೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಷೇರುಪೇಟೆಗಳು ದಾಖಲೆ ಮಟ್ಟದಲ್ಲಿ ವಹಿವಾಟ ನಡೆಸುತ್ತಿದ್ದು, ಮಾರುಕಟ್ಟೆ ಮೌಲ್ಯವು ಗರಿಷ್ಠ ಮಟ್ಟದಲ್ಲಿ ಇದೆ. ಹೀಗಾಗಿ, ಷೇರುಪೇಟೆಗಳಲ್ಲಿ ಅಲ್ಪಾವಧಿಯಲ್ಲಿ ಲಾಭ ಗಳಿಕೆಯ ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ವಿಜಯಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ)

ಜೂನ್‌ 12; (–) ₹627 ಕೋಟಿ  ಮಾರಾಟ

ಜೂನ್‌ 13;₹1,678 ಕೋಟಿ

ಜೂನ್‌ 14;₹1,715 ಕೋಟಿ

ಜೂನ್‌ 15;₹3,085 ಕೋಟಿ

ಜೂನ್‌ 16;₹795 ಕೋಟಿ

ಮಾಹಿತಿ: ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.