ಬೆಂಗಳೂರು: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಭಾರತದ ಮಾರುಕಟ್ಟೆಗಳಿಂದ ಬಂಡವಾಳ ಹಿಂದಕ್ಕೆ ಪಡೆಯುವ ಪ್ರಕ್ರಿಯೆಯು ಸತತ ಆರನೇ ತಿಂಗಳಿನಲ್ಲಿಯೂ ಮುಂದುವರಿದಿದೆ. ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ 2022ರ ಜನವರಿಯಿಂದ ಜೂನ್ 3ರವರೆಗಿನ ಅವಧಿಯಲ್ಲಿ ಷೇರುಪೇಟೆ ಮತ್ತು ಸಾಲಪತ್ರ ಮಾರುಕಟ್ಟೆಯಿಂದ ಒಟ್ಟಾರೆ ₹1.77 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ಹಿಂದಕ್ಕೆ ಪಡೆದಿದ್ದಾರೆ.
ದೇಶಿ ಮತ್ತು ಜಾಗತಿಕ ವಿದ್ಯಮಾನಗಳು ಎಫ್‌ಪಿಐ ಹೊರಹರಿವಿಗೆ ಕಾರಣವಾಗುತ್ತಿವೆ. ಡಾಲರ್ ಮೌಲ್ಯ ವೃದ್ಧಿ,ಅಮೆರಿಕದ ಬಾಂಡ್ ಗಳಿಕೆ ಹೆಚ್ಚಾಗುತ್ತಿರುವುದು, ಹಾಗೂ ಅಮೆರಿಕದ ಕೇಂದ್ರೀಯ ಬ್ಯಾಂಕ್, ಫೆಡರಲ್ ರಿಸರ್ವ್‌ನಿಂದ ಬಡ್ಡಿದರ ಏರಿಕೆಯು ಬಂಡವಾಳ ಹೊರಹರಿವಿಗೆ ಪ್ರಮುಖ ಕಾರಣಗಳಾಗಿವೆ.
2021–22ನೇ ಹಣಕಾಸು ವರ್ಷದಲ್ಲಿ ಭಾರತದ ಬಂಡವಾಳ ಮಾರುಕಟ್ಟೆಗಳಿಂದ ದಾಖಲೆಯ ₹1.4 ಲಕ್ಷ ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಈ ಹಿಂದೆ, 2018-19ರಲ್ಲಿ ₹88 ಕೋಟಿ, 2015–16ರಲ್ಲಿ ₹14,171 ಕೋಟಿ ಮತ್ತು 2008–09ರಲ್ಲಿ ₹47,706 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು.
ಕಚ್ಚಾ ತೈಲ ದರ ಏರಿಕೆ, ಹಣದುಬ್ಬರ ಹೆಚ್ಚಳ ಮತ್ತು ಕೇಂದ್ರೀಯ ಬ್ಯಾಂಕ್ ತನ್ನ ಹಣಕಾಸು ನೀತಿಯನ್ನು ಬಿಗಿಗೊಳಿಸಿರುವ ಕಾರಣ ಮುಂಬರುವ ದಿನಗಳಲ್ಲಿಯೂ ಎಫ್‌ಪಿಐ ಒಳಹರಿವು ಅಸ್ಥಿರವಾಗಿರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಏಷ್ಯಾದಿಂದಲೂ ಹೊರಹರಿವು: ಏಷ್ಯಾದ ಷೇರುಪೇಟೆಗಳಿಂದಲೂ ಬಂಡವಾಳ ಹೊರಹರಿವು ಹೆಚ್ಚಾಗುತ್ತಿದೆ. ಭಾರತ, ತೈವಾನ್, ದಕ್ಷಿಣ ಕೊರಿಯಾ, ಫಿಲಿಪ್ಪೀನ್ಸ್, ವಿಯೆಟ್ನಾಂ, ಇಂಡೊನೇಷ್ಯಾ ಮತ್ತು ಥಾಯ್ಲೆಂಡ್ ದೇಶಗಳ ಷೇರುಪೇಟೆಗಳ ಮಾಹಿತಿ ಪ್ರಕಾರ, ಮೇ ತಿಂಗಳಿನಲ್ಲಿ ₹28,634 ಕೋಟಿ ಹಿಂದಕ್ಕೆ ಪಡೆಯಲಾಗಿದೆ.
ಹಣದುಬ್ಬರ ನಿಯಂತ್ರಿಸಲು ಕೇಂದ್ರೀಯ ಬ್ಯಾಂಕ್‌ಗಳು ಹಣಕಾಸು ನೀತಿಯನ್ನು ಬಿಗಿಗೊಳಿಸುತ್ತಿವೆ. ಇದರ ಜೊತೆಗೆ ಚೀನಾದಲ್ಲಿ ಕಠಿಣ ಸ್ವರೂಪದ ಲಾಕ್‌ಡೌನ್ ವಿಧಿಸಿದ್ದರಿಂದ ಮೇನಲ್ಲಿ ಈ ಪ್ರಮಾಣದ ಬಂಡವಾಳ ಹೊರಹರಿವು ಉಂಟಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಬಂಡವಾಳ ಹೊರಹರಿವು (ಕೋಟಿಗಳಲ್ಲಿ)
ಜನವರಿ; ₹ 28,526
ಫೆಬ್ರುವರಿ; ₹ 38,068
ಮಾರ್ಚ್; ₹ 50,068
ಏಪ್ರಿಲ್; ₹ 22,688
ಮೇ; ₹ 36,518
ಜೂ 1–3; ₹ 1,654
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.