ನವದೆಹಲಿ: ಭಾರತದ ಅರ್ಥ ವ್ಯವಸ್ಥೆಯ ಮೂಲಭೂತ ಅಂಶಗಳು ಬಲವಾಗಿರುವುದರ ವಿಶ್ವಾಸದಿಂದಾಗಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜನವರಿ ಮೊದಲ ವಾರದಲ್ಲಿ ದೇಶದ ಷೇರು ಮಾರುಕಟ್ಟೆಯಲ್ಲಿ ₹4,800 ಕೋಟಿ ಹಾಗೂ ಸಾಲದ ಮಾರುಕಟ್ಟೆಯಲ್ಲಿ ಹೆಚ್ಚುವರಿಯಾಗಿ ₹4 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ.
2024ರ ಉದ್ದಕ್ಕೂ ಅಮೆರಿಕದ ಬಡ್ಡಿ ದರದಲ್ಲಿ ನಿರಂತರ ಇಳಿಕೆಯ ಸಾಧ್ಯತೆ ಇರುವುದು, ಹೊಸ ವರ್ಷದ ಆರಂಭಿಕ ತಿಂಗಳುಗಳಲ್ಲಿ ಹಾಗೂ ಸಾರ್ವತ್ರಿಕ ಚುನಾವಣೆಗೆ ಮುನ್ನ ಎಫ್‌ಪಿಐಗಳು ತಮ್ಮ ಖರೀದಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ. ಇದಲ್ಲದೆ, ಸಾಲದ ಮಾರುಕಟ್ಟೆಯಲ್ಲೂ ಎಫ್‌ಪಿಐ ಒಳಹರಿವು ವೇಗವರ್ಧನೆ ಆಗಲಿದೆ ಎಂದು ಸಹ ತಿಳಿಸಿದ್ದಾರೆ.
ಅಂಕಿ ಅಂಶಗಳ ಪ್ರಕಾರ, ವಿದೇಶಿ ಹೂಡಿಕೆದಾರರು ಜನವರಿ 5ರವರೆಗೆ ದೇಶದ ಷೇರು ಮಾರುಕಟ್ಟೆಯಲ್ಲಿ ₹4,773 ಕೋಟಿ ನಿವ್ವಳ ಹೂಡಿಕೆ ಮಾಡಿದ್ದಾರೆ. ಕಳೆದ ಡಿಸೆಂಬರ್ ಹಾಗೂ ನವೆಂಬರ್ ತಿಂಗಳಲ್ಲಿ ಕ್ರಮವಾಗಿ ₹66,134 ಕೋಟಿ ಮತ್ತು ₹9 ಸಾವಿರ ಕೋಟಿ ಹೂಡಿಕೆ ಮಾಡಿದ್ದರು.
2023ರಲ್ಲಿ ವಿದೇಶಿ ಹೂಡಿಕೆದಾರರು ಷೇರುಗಳಲ್ಲಿ ₹1.71 ಲಕ್ಷ ಕೋಟಿ ಮತ್ತು ಸಾಲದ ಮಾರುಕಟ್ಟೆಯಲ್ಲಿ ₹68,663 ಕೋಟಿಯಷ್ಟು ಹೂಡಿಕೆ ಮಾಡಿದ್ದಾರೆ. ಬಂಡವಾಳ ಮಾರುಕಟ್ಟೆಯಲ್ಲಿ ಒಟ್ಟು ₹2.4 ಲಕ್ಷ ಕೋಟಿ ಹೂಡಿಕೆ ಆಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.