ADVERTISEMENT

₹18,979 ಕೋಟಿ ಮೌಲ್ಯದ ಷೇರು ಖರೀದಿಸಿದ ವಿದೇಶಿ ಹೂಡಿಕೆದಾರರು

ಪಿಟಿಐ
Published 13 ನವೆಂಬರ್ 2022, 10:39 IST
Last Updated 13 ನವೆಂಬರ್ 2022, 10:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ದೇಶದ ಷೇರುಪೇಟೆಯಲ್ಲಿ ನವೆಂಬರ್ 1 ರಿಂದ 11ರವರೆಗಿನ ಅವಧಿಯಲ್ಲಿ ₹ 18,979 ಕೋಟಿ ಹೂಡಿಕೆ ಮಾಡಿದ್ದಾರೆ. ಅಮೆರಿಕದ ಹಣದುಬ್ಬರ ಇಳಿಕೆ ಮತ್ತು ಡಾಲರ್‌ ಮೌಲ್ಯ ಏರಿಕೆಯು ತುಸು ತಗ್ಗಿದ್ದರಿಂದ ಇಷ್ಟು ಮೊತ್ತ ಹೂಡಿಕೆ ಮಾಡಿದ್ದಾರೆ.

ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ಅಕ್ಟೋಬರ್‌ನಲ್ಲಿ ₹ 8 ಕೋಟಿ ಮತ್ತು ಸೆಪ್ಟೆಂಬರ್‌ನಲ್ಲಿ ₹ 7,624 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು. 2022ರಲ್ಲಿ ಈವರೆಗೆ ಒಟ್ಟು ₹ 1.5 ಲಕ್ಷ ಕೋಟಿ ಬಂಡವಾಳ ಹೊರಹರಿವು ಆದಂತಾಗಿದೆ.

ಸಾಲಪತ್ರ ಮಾರುಕಟ್ಟೆಯಿಂದ ನವೆಂಬರ್‌ 1 ರಿಂದ 11ರವರೆಗಿನ ಅವಧಿಯಲ್ಲಿ ₹2,784 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ADVERTISEMENT

‘ಅಮೆರಿಕದ ಹಣದುಬ್ಬರವು ಇಳಿಮುಖ ಹಾದಿ ಹಿಡಿಯುವ ಸೂಚನೆ ನೀಡಿದೆ. ಡಾಲರ್‌ ಮತ್ತು ಬಾಂಡ್‌ ಗಳಿಕೆಯೂ ಕಡಿಮೆ ಆಗುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ವಿದೇಶಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಗೆ ಮುಂದಾಗುವ ಸಾಧ್ಯತೆ ಇದೆ’ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

‘ಅಮೆರಿಕದ ಡಾಲರ್‌ ಎದುರು ರೂಪಾಯಿ ದೃಢವಾಗಿರುವುದು ಸಹ ಭಾರತದ ಷೇರುಪೇಟೆಗಳಲ್ಲಿ ಬಂಡವಾಳ ತೊಡಗಿಸುವಂತೆ ವಿದೇಶ ಹೂಡಿಕೆದಾರರಿಗೆ ಉತ್ತೇಜನ ನೀಡಿದೆ’ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ತಿಳಿಸಿದ್ದಾರೆ.

‘ಹಣದುಬ್ಬರ ನಿಯಂತ್ರಿಸಲು ಆರ್‌ಬಿಐ ತೆಗೆದುಕೊಳ್ಳುತ್ತಿರುವ ಕ್ರಮಗಳು, ತೆರಿಗೆ ಸಂಗ್ರಹದಲ್ಲಿನ ಹೆಚ್ಚಳ, ಖರೀದಿ ಸಾಮರ್ಥ್ಯವು ಕೋವಿಡ್‌ ಪೂರ್ವದ ಮಟ್ಟಕ್ಕೆ ಮರಳಿರುವ ಕಾರಣಗಳಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಭಾರತವನ್ನು ಉತ್ತಮ ಸ್ಥಿತಿಯಲ್ಲಿ ನಿಲ್ಲುವಂತೆ ಮಾಡಿದೆ’ ಎಂದು ಬಿಡಿಒ ಇಂಡಿಯಾದ ಪಾಲುದಾರ ಮನೋಜ್‌ ಪುರೋಹಿತ್‌ ಹೇಳಿದ್ದಾರೆ.

‘ಚೀನಾವು ಸದ್ಯ ಆರ್ಥಿಕ ಮತ್ತು ರಾಜಕೀಯ ಅನಿಶ್ಚಿತತೆ ಎದುರಿಸುತ್ತಿದೆ. ಹೀಗಾಗಿ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯಲ್ಲಿ ಒಂದಷ್ಟು ಭಾರತದ ಕಡೆಗೆ ಹರಿದುಬರುತ್ತಿದೆ. ಇದರಿಂದಾಗಿಯೂ ಭಾರತವು ಈಕ್ವಿಟಿ ಹೂಡಿಕೆಗೆ ಆದ್ಯತೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.