ನವದೆಹಲಿ: ರಾಜಕೀಯ ಸ್ಥಿರತೆ, ದೃಢವಾದ ಆರ್ಥಿಕ ಬೆಳವಣಿಗೆ ಮತ್ತು ಅಮೆರಿಕ ಬಾಂಡ್ ಇಳುವರಿಯಲ್ಲಿ ಸ್ಥಿರವಾದ ಇಳಿಕೆಯಿಂದಾಗಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಈ ತಿಂಗಳವರೆಗೆ ದೇಶದ ಷೇರುಮಾರುಕಟ್ಟೆಯಲ್ಲಿ ₹57,300 ಕೋಟಿಯಷ್ಟು ಹೂಡಿಕೆ ಮಾಡಿದ್ದಾರೆ.
ಇದರೊಂದಿಗೆ ಎಫ್‌ಪಿಐಗಳ ಒಟ್ಟು ಹೂಡಿಕೆ ಈ ವರ್ಷ ₹1.62 ಲಕ್ಷ ಕೋಟಿಯಷ್ಟು ಆಗಿದೆ.
ಅಮೆರಿಕ ಬಡ್ಡಿ ದರಗಳಲ್ಲಿ ಇಳಿಕೆಯಾಗುವ ನಿರೀಕ್ಷೆ ಮತ್ತು 2024ರಲ್ಲಿ ಎಫ್‌ಪಿಐಗಳು ತಮ್ಮ ಖರೀದಿಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.
ಅಂಕಿ ಅಂಶಗಳ ಪ್ರಕಾರ, ಎಫ್‌ಪಿಐಗಳು ಈ ತಿಂಗಳಲ್ಲಿ (ಡಿಸೆಂಬರ್ 22 ರವರೆಗೆ) ಭಾರತೀಯ ಷೇರುಗಳಲ್ಲಿ ₹57,313 ಕೋಟಿಗಳಷ್ಟು ನಿವ್ವಳ ಹೂಡಿಕೆ ಮಾಡಿದ್ದಾರೆ. ಈ ವರ್ಷದಲ್ಲೇ ಇದು ಅತಿ ಹೆಚ್ಚು ಮಾಸಿಕ ಒಳಹರಿವು ಆಗಿದೆ.
ಅಕ್ಟೋಬರ್‌ನಲ್ಲಿ ನಿವ್ವಳ ಹೂಡಿಕೆ ₹9 ಸಾವಿರ ಕೋಟಿ ಆಗಿತ್ತು. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸಾಗರೋತ್ತರ ಹೂಡಿಕೆದಾರರು ₹39,300 ಕೋಟಿ ಹಿಂತೆಗೆದುಕೊಂಡಿದ್ದರು ಎಂದು ಠೇವಣಿದಾರರ ಅಂಕಿ ಅಂಶಗಳು ತಿಳಿಸಿವೆ.
ರಾಜಕೀಯ ಸ್ಥಿರತೆ ಮತ್ತು ಭಾರತದ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಸಕಾರಾತ್ಮಕ ಭಾವನೆಗಳು ಎಫ್‌ಪಿಐ ಒಳಹರಿವು ಹೆಚ್ಚಾಗಲು ಕೊಡುಗೆ ನೀಡಿದ ಅಂಶಗಳಾಗಿವೆ ಎಂದು ಮಾರ್ನಿಂಗ್‌ಸ್ಟಾರ್ ಇನ್ವೆಸ್ಟ್‌ಮೆಂಟ್ ರಿಸರ್ಚ್ ಇಂಡಿಯಾದ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ. ದೇಶದ ಸ್ಥಿರ ಮತ್ತು ದೃಢವಾದ ಆರ್ಥಿಕತೆಯು ಕಾರ್ಪೊರೇಟ್ ಗಳಿಕೆಗಳು ಮತ್ತು ಆರಂಭಿಕ ಸಾರ್ವಜನಿಕ ಕೊಡುಗೆಗಳಿಂದ (ಐಪಿಒ), ಭಾರತದಲ್ಲಿ ಹೂಡಿಕೆ ಅವಕಾಶಗಳನ್ನು ಹುಡುಕಲು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಿದೆ ಎಂದು ಹೇಳಿದ್ದಾರೆ.
ಬಾಂಡ್‌ಗಳಿಗೆ ಸಂಬಂಧಿಸಿದಂತೆ ಪರಿಶೀಲನೆಯ ಅವಧಿಯಲ್ಲಿ ಸಾಲದ ಮಾರುಕಟ್ಟೆಯು ₹15,545 ಕೋಟಿ ಆಗಿದೆ. ನವೆಂಬರ್‌ನಲ್ಲಿ ₹14,860 ಕೋಟಿ ಮತ್ತು ಅಕ್ಟೋಬರ್‌ನಲ್ಲಿ 6,381 ಕೋಟಿ ಒಳಹರಿವನ್ನು ಸ್ವೀಕರಿಸಿದೆ ಎಂದು ಅಂಕಿ–ಅಂಶಗಳು ತಿಳಿಸಿವೆ.
ಭಾರತದ ಮಾರುಕಟ್ಟೆಯು ಚೈತನ್ಯಶೀಲವಾಗಿದೆ. ಅಂದಾಜನ್ನೂ ಮೀರಿ ಜಿಡಿಪಿ ಬೆಳವಣಿಗೆ ಇದೆ. ತಯಾರಿಕಾ ವಲಯವು ಬೆಳೆಯುತ್ತಿದೆ. ಇದು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ–ಮಯಾಂಕ್ ಮೆಹ್ರಾ ಕ್ರೇವಿಂಗ್ ಆಲ್ಫಾ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.