ADVERTISEMENT

ವಿದೇಶಿ ಬಂಡವಾಳ ಹೂಡಿಕೆ: ₹11,730 ಕೋಟಿ ಒಳಹರಿವು

ಪಿಟಿಐ
Published 16 ಜೂನ್ 2024, 14:32 IST
Last Updated 16 ಜೂನ್ 2024, 14:32 IST
......
......   

ನವದೆಹಲಿ: ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದರಿಂದಾಗಿ ಜೂನ್‌ 14ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಷೇರುಪೇಟೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹11,730 ಕೋಟಿ ಹೂಡಿಕೆ ಮಾಡಿದ್ದಾರೆ.

ಪ್ರಸಕ್ತ ತಿಂಗಳ ಮೊದಲ ವಾರದಲ್ಲಿ ₹14,794 ಕೋಟಿ ಬಂಡವಾಳವನ್ನು ಹಿಂತೆಗೆದುಕೊಂಡಿದ್ದರು. ಎರಡನೇ ವಾರದಲ್ಲಿ ₹3,064 ಕೋಟಿ ಹಿಂಪಡೆದಿದ್ದಾರೆ.

‘ಮೊದಲ ವಾರ ಏರಿಳಿತ ಕಂಡಿದ್ದ ದೇಶೀಯ ಮಾರುಕಟ್ಟೆಗಳು ಎರಡನೇ ವಾರದ ವಹಿವಾಟಿನಲ್ಲಿ ಸ್ಥಿರತೆ ಕಂಡಿವೆ. ಭಾರತದ ಚಂಚಲತೆಯ ಮಾಪಕವಾದ ಇಂಡಿಯಾ ವಿಐಎಕ್ಸ್ ಕುಸಿತ ಕಂಡಿದ್ದರಿಂದ ಮಾರುಕಟ್ಟೆಗಳ ಬಲವರ್ಧನೆಗೆ ಸಹಕಾರಿಯಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯ್‌ಕುಮಾರ್‌ ಹೇಳಿದ್ದಾರೆ.

ADVERTISEMENT

‘ಕೇಂದ್ರದಲ್ಲಿ ಮೂರನೇ ಬಾರಿಗೆ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹಣಕಾಸು ನೀತಿಗಳ ಸುಧಾರಣೆ ಮತ್ತು ಆರ್ಥಿಕತೆಯ ಬೆಳವಣಿಗೆಗೆ ಒತ್ತು ನೀಡಲಿದೆ ಎಂಬ ಭರವಸೆ ಹೂಡಿಕೆದಾರರಿಗೆ ಮೂಡಿದೆ. ಹಾಗಾಗಿ, ಮಾರುಕಟ್ಟೆಗಳು ಏರಿಕೆ ಕಂಡಿವೆ’ ಎಂದು ಮಾರ್ನಿಂಗ್‌ಸ್ಟಾರ್‌ ಇನ್‌ವೆಸ್ಟ್‌ಮೆಂಟ್ಸ್‌ ರಿಸರ್ಚ್ ಇಂಡಿಯಾದ ಸಹ ನಿರ್ದೇಶಕ (ಸಂಶೋಧನಾ ವಿಭಾಗ) ಹಿಮಾಂಶು  ಶ್ರೀವಾಸ್ತವ ಹೇಳಿದ್ದಾರೆ.

‘ಅಮೆರಿಕದಲ್ಲಿ ಚಿಲ್ಲರೆ ಹಣದುಬ್ಬರ ತಗ್ಗಿದೆ. ಹಾಗಾಗಿ, ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತಗೊಳಿಸುವ ಆಸೆ ಚಿಗುರೊಡೆದಿದೆ. ಇದರಿಂದ ಅಲ್ಲಿ ಬಾಂಡ್‌ಗಳ ಮೇಲಿನ ಗಳಿಕೆ ಕಡಿಮೆಯಾಗುತ್ತಿದೆ. ಹೂಡಿಕೆದಾರರು ಸುರಕ್ಷಿತ ಮಾರುಕಟ್ಟೆಗಳತ್ತ ಮುಖ ಮಾಡಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.