ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಫೆಬ್ರುವರಿ 17ಕ್ಕೆ ಕೊನೆಗೊಂಡ ವಾರದ ವಹಿವಾಟಿನಲ್ಲಿ ₹ 7,666 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಈ ಮೂಲಕ ಅವರು ಮತ್ತೆ ಭಾರತದ ಷೇರುಪೇಟೆಗಳತ್ತ ಮುಖಮಾಡಿರುವಂತೆ ಕಾಣುತ್ತಿದೆ.
ಫೆಬ್ರುವರಿ 6ರಿಂದ 10ರವರೆಗಿನ ವಹಿವಾಟಿನಲ್ಲಿ ₹ 3,920 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.
ದೇಶದ ಷೇರುಪೇಟೆಗಳು ‘ಅದಾನಿ’ ಷೇರುಗಳ ಮೌಲ್ಯ ಕುಸಿತದಿಂದ ಚೇತರಿಕೆ ಕಂಡುಕೊಳ್ಳಲು ಆರಂಭಿಸಿವೆ. ಇದರಿಂದಾಗಿ ಎಫ್‌ಪಿಐ ಹೂಡಿಕೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.
ಜನವರಿ ಆರಂಭದಿಂದ ಕಂಡುಬಂದ ಷೇರುಗಳ ಮಾರಾಟ ಪ್ರಕ್ರಿಯೆಯು ಕೊನೆಗೊಂಡಂತೆ ಕಾಣುತ್ತಿದೆ. ಆದರೆ, ಮತ್ತೊಮ್ಮೆ ಹೆಚ್ಚಿನ ಮಟ್ಟದಲ್ಲಿ ಮಾರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ ಎಂದು ಜಿಯೊಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷದಲ್ಲಿ ಈವರೆಗೆ ನಿಫ್ಟಿ–50 ಸೂಚ್ಯಂಕವು ಶೇ 1.4ರಷ್ಟು ಇಳಿಕೆ ಕಂಡಿದೆ. ಇನ್ನೊಂದೆಡೆ ತೈವಾನ್ ಇಂಡೆಕ್ಸ್ ಶೇ 8.3ರಷ್ಟು ಮತ್ತು ಶಾಂಘೈ ಕಂಪೋಸಿಟ್ ಶೇ 3.4ರಷ್ಟು ಏರಿಕೆ ಆಗಿದೆ ಎಂದು ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.
ವಿದೇಶಿ ಹೂಡಿಕೆದಾರರು ವಾಹನ ಮತ್ತು ವಾಹನ ಬಿಡಿಭಾಗಗಳು ಹಾಗೂ ನಿರ್ಮಾಣ ವಲಯದ ಷೇರುಗಳನ್ನು ಖರೀದಿಸುತ್ತಿದ್ದು, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಿಗೆ ಸಂಬಂಧಿಸಿದ ವಲಯಗಳ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.